
ಸಂವಿಧಾನದ ಅರಿವಿನೊಂದಿಗೆ ತನ್ನ ಹಕ್ಕುಗಳಿಗಾಗಿ ಮತ್ತು ಭೂಮಿಗಾಗಿ ನಡೆಸುವ ಹೋರಾಟವೇ ಈ ಸಿನಿಮಾದ ತಿರುಳು.
ದುನಿಯಾ ವಿಜಯ್ ನಟನೆಯ ʼಲ್ಯಾಂಡ್ ಲಾರ್ಡ್"ಗೆ ತೆರಿಗೆ ವಿನಾಯಿತಿ: ಸಿದ್ದರಾಮಯ್ಯ
ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವ 'ಲ್ಯಾಂಡ್ಲಾರ್ಡ್' ಚಿತ್ರಕ್ಕೆ ಕರ್ನಾಟಕ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ.
ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆ ವಿಷಯವಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಜನವರಿ 23ರಂದು ರಿಲೀಸ್ ಆಗಿತ್ತು. ಉಳ್ಳವರು ಹಾಗೂ ಬಡವರ ನಡುವಿನ ಕಥಾಹಂದರವನ್ನು ಹೊಂದಿರುವ ಈ ಸಿನಿಮಾಗೆ ವಿಮರ್ಶಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ದಲಿತ ಸಂಘಟನೆಗಳು ಮನವಿ ಮಾಡಿದ್ದವು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಲ್ಯಾಂಡ್ ಲಾರ್ಡ್ ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ಚಿತ್ರ ದುನಿಯಾ ವಿಜಯ್ ನಾಯಕತ್ವದ "ಲ್ಯಾಂಡ್ ಲಾರ್ಡ್" ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ ಎಂದು ಅವರು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
'ಲ್ಯಾಂಡ್ಲಾರ್ಡ್' ಸಿನಿಮಾ 1980ರ ದಶಕದ ಗ್ರಾಮೀಣ ಕರ್ನಾಟಕದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಭೂಮಿ, ಹಕ್ಕು ಮತ್ತು ನ್ಯಾಯದ ಸುತ್ತ ಈ ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದ ನಾಯಕ ರಾಚಯ್ಯ , ತನ್ನ ಹೆಂಡತಿ ನಿಂಗವ್ವ ಮತ್ತು ಮಗಳು ಭಾಗ್ಯ ಜೊತೆ ನೆಮ್ಮದಿಯಾಗಿ ಬದುಕಲು ಬಯಸುವ ಸಾಮಾನ್ಯ ಕಾರ್ಮಿಕ. ತನ್ನ ಪಾಲಿಗೂ ಒಂದು ಪುಟ್ಟ ಭೂಮಿ ಇರಬೇಕು ಎಂಬುದು ಆತನ ಕನಸು. ಇಡೀ ಊರನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕ್ರೂರ ಭೂಮಾಲೀಕ 'ಸಣ್ಣ ಧಣಿ' ವಿರುದ್ಧ ರಾಚಯ್ಯ ಹೇಗೆ ಸಿಡಿದು ನಿಲ್ಲುತ್ತಾನೆ ಮತ್ತು ಸಂವಿಧಾನದ ಅರಿವಿನೊಂದಿಗೆ ತನ್ನ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ.
ಈ ಸಿನಿಮಾದಲ್ಲಿ ದುನಿಯಾ ವಿಜಯ್, ರಾಜ್ ಬಿ. ಶೆಟ್ಟಿ, ರಚಿತಾ ರಾಮ್, ರಿತನ್ಯಾ ವಿಜಯ್ ಸೇರಿದಂತೆ, ಉಮಾಶ್ರೀ, ಅಚ್ಯುತ್ ಕುಮಾರ್, ಶಿಶಿರ್ ಬೈಕಾಡಿ ಮತ್ತು ರಾಕೇಶ್ ಅಡಿಗ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸ್ವಾಮಿ ಜೆ. ಗೌಡ ಅವರ ಛಾಯಾಗ್ರಹಣವಿದೆ. ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕೆ.ವಿ. ಸತ್ಯಪ್ರಕಾಶ್ ಮತ್ತು ಕೆ.ಎಸ್. ಸೂರಜ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

