ಅಣ್ಣಾವ್ರ 97ನೇ ಜನ್ಮದಿನ: ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ
x

ವರನಟ ಡಾ.ರಾಜ್‌ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಅಭಿಮಾನಿಗಳು ನಿರ್ಮಿಸಿರುವ ಮೂರು ಅಡಿ ಎತ್ತರದ ಕಂಚಿನ ಪುತ್ಥಳಿ. 

ಅಣ್ಣಾವ್ರ 97ನೇ ಜನ್ಮದಿನ: ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ

ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಂಭ್ರಮ. ಅಣ್ಣಾವ್ರ ಸರಳತೆ, ಜೀವನದ ಮೌಲ್ಯಗಳನ್ನು ಸ್ಮರಿಸಿದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು.


Click the Play button to hear this message in audio format

ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ಶುಕ್ರವಾರ ರಾಜ್ಯಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ರಾಜಧಾನಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಪುಣ್ಯಭೂಮಿಯು ಅಭಿಮಾನಿಗಳ ಸಾಗರದಿಂದ ತುಂಬಿ ಹೋಗಿದ್ದು, ನೆಚ್ಚಿನ ನಟನಿಗೆ ಗೌರವ ಸಲ್ಲಿಸಲು ಜನಸಾಗರವೇ ಹರಿದುಬಂದಿತ್ತು.

ಬಣ್ಣ ಬಣ್ಣದ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಅಣ್ಣಾವ್ರ ಸಮಾಧಿಗೆ ಮುಂಜಾನೆಯೇ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಕುಟುಂಬಸ್ಥರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ ಹಾಗೂ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.

ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ತಮ್ಮ ಆರಾಧ್ಯ ದೈವದ ಸಮಾಧಿಗೆ ಪುಷ್ಪಹಾರ ಅರ್ಪಿಸಿ ಭಕ್ತಿಭಾವ ಮೆರೆದರು. ಪುಣ್ಯಭೂಮಿಯ ಆವರಣದಲ್ಲಿ ಅಣ್ಣಾವ್ರ ಗೀತೆಗಳನ್ನು ಹಾಡುವ ಮೂಲಕ ಹಾಗೂ ಅವರ ಖ್ಯಾತ ಸಂಭಾಷಣೆಗಳನ್ನು ಉಚ್ಛರಿಸುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು. ಅಣ್ಣಾವ್ರ ಸರಳತೆ, ಕನ್ನಡ ಭಾಷೆಯ ಮೇಲಿನ ಅಪಾರ ಪ್ರೇಮ ಮತ್ತು ಅವರು ಹಾಕಿಕೊಟ್ಟ ಜೀವನದ ಮೌಲ್ಯಗಳು ಇಂದಿಗೂ ನಮಗೆ ಪ್ರೇರಣೆ ಎಂದು ಭಾವುಕರಾಗಿ ನುಡಿದರು.

ಸ್ಟಿಕ್ಕರ್ ಮಾರಿ ಸ್ವಂತ ಮನೆ ಕಟ್ಟಿಕೊಂಡ ಅಭಿಮಾನಿ

ಅಣ್ಣಾವ್ರ ಭಾವಚಿತ್ರವಿರುವ ಸ್ಟಿಕ್ಕರ್‌ಗಳನ್ನು ಮಾರಾಟ ಮಾಡುವ ಮೂಲಕ ಇಂದು ಅವರು ಸ್ವಂತ ಮನೆಯನ್ನು ನಿರ್ಮಿಸಿಕೊಂಡು ಸುಖಿ ಜೀವನ ಮಾಡಿಕೊಂಡಿರುವ ಡಾ.ರಾಜ್‌ಕುಮಾರ್‌ ಅವರ ಅಭಿಮಾನಿ ಅಭಿಮನ್ಯು ಕೋಳಿ ʼ ದ ಫಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ, ʻʻಉತ್ತರ ಕರ್ನಾಟಕದಾದ್ಯಂತ ತಾವೇ ವಿನ್ಯಾಸಗೊಳಿಸಿ ಛಾಪಿಸಿದ ರಾಜ್‌ಕುಮಾರ್ ಅವರ ಐಡಿ ಕಾರ್ಡ್‌ಗಳಿಗೆ ಭಾರಿ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಇತರರು ಇದೇ ಕಾರ್ಡ್‌ಗಳನ್ನು 20-30 ರೂಪಾಯಿಗೆ ಮಾರಾಟ ಮಾಡುತ್ತಿದ್ದರೂ, ನಾನು ಕೇವಲ 10 ರೂಪಾಯಿಗೆ ಮಾರಾಟ ಮಾಡುತ್ತಿದ್ದೇನೆ. ಈ ವ್ಯಾಪಾರದಲ್ಲಿ ಒಂದು ರೂಪಾಯಿ ಖರ್ಚು ಮಾಡಿದರೆ ಐದು ರೂಪಾಯಿ ಲಾಭ ಸಿಗುತ್ತಿತ್ತು. ಬೀದಿ ಬದಿ ಸಂತೆ, ಜಾತ್ರೆ ಹಾಗೂ ವಿವಿಧ ಉತ್ಸವಗಳಲ್ಲಿ ಈ ಸ್ಟಿಕ್ಕರ್‌ಗಳನ್ನು ಮಾರಾಟ ಮಾಡಿ ಬಂದ ಲಾಭದಿಂದಲೇ ಸುಂದರ ಮನೆಯನ್ನು ಕಟ್ಟಿದ್ದೇನೆʼʼ ಎಂದು ಅವರು ತಿಳಿಸಿದರು.

ʻʻಕೇವಲ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲದೆ, ತಮ್ಮ ಕೌಟುಂಬಿಕ ನೆಮ್ಮದಿಗೂ ಅಣ್ಣಾವ್ರೇ ಕಾರಣ. ಮದುವೆಯಾಗಿ 22 ವರ್ಷಗಳಾದರೂ ಪತ್ನಿಯೊಂದಿಗೆ ಎಂದೂ ಜಗಳವಾಡಿಲ್ಲ. ಇಡೀ ಕುಟುಂಬವೇ ಡಾ. ರಾಜ್‌ಕುಮಾರ್ ಅವರ ಅಭಿಮಾನಿಗಳಾಗಿರುವುದು ಇದಕ್ಕೆ ಕಾರಣ. ವ್ಯಾಪಾರದಲ್ಲಿ ದಣಿವಾದಾಗ ಅಥವಾ ಮನಸ್ಸಿಗೆ ಬೇಜಾರಾದಾಗ ಅಣ್ಣಾವ್ರ ಹಾಡುಗಳನ್ನು ಕೇಳುತ್ತಾ ಮರದ ನೆರಳಿನಲ್ಲಿ ವಿಶ್ರಮಿಸಿ, ಮತ್ತೆ ಅದೇ ಉತ್ಸಾಹದಿಂದ ವ್ಯಾಪಾರ ಮುಂದುವರಿಸುತ್ತೇನೆʼʼ ಎಂದು ಅವರು ತಿಳಿಸಿದರು.




ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಣ್ಣಾವ್ರೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಅವರ ಮುಗ್ಧತೆ ಮತ್ತು ಸರಳತೆಯನ್ನು ಕೊಂಡಾಡಿದ್ದಾರೆ. ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅವರು,"ಲಕ್ಷಾಂತರ ಅಭಿಮಾನಿಗಳಿದ್ದರೂ ರಾಜಕುಮಾರ್ ಅವರಿಗೆ ಕಿಂಚಿತ್ತೂ ಅಹಂಕಾರವಿರಲಿಲ್ಲ. ನಮ್ಮ ಮನೆಗೆ ಬರುವಾಗ ಮೊದಲು ಫೋನ್ ಮಾಡಿ, 'ಇವತ್ತು ಗುರುವಾರ, ಮಾಂಸಾಹಾರ ತಿನ್ನಲ್ಲ, ಒಬ್ಬಟ್ಟು ಮಾಡಿ ಅಮ್ಮ' ಎಂದು ಕೇಳುವಷ್ಟು ಮುಗ್ಧತೆ ಅವರಲ್ಲಿತ್ತುʼʼ ಎಂದು ಅವರು ತಿಳಿಸಿದರು.

ಪುಣ್ಯಭೂಮಿಯ ಆವರಣದಲ್ಲಿ ಅಭಿಮಾನಿಗಳು ಅಣ್ಣಾವ್ರ ಗೀತೆಗಳನ್ನು ಹಾಡುವ ಮೂಲಕ ಹಾಗೂ ಅವರ ಖ್ಯಾತ ಸಂಭಾಷಣೆಗಳನ್ನು ಉಚ್ಛರಿಸುವ ಮೂಲಕ ಸಂಭ್ರಮಿಸಿದರು. ಅಣ್ಣಾವ್ರ ಸರಳತೆ, ಕನ್ನಡ ಭಾಷೆಯ ಮೇಲಿನ ಅಪಾರ ಪ್ರೇಮ ಮತ್ತು ಅವರು ಹಾಕಿಕೊಟ್ಟ ಜೀವನದ ಮೌಲ್ಯಗಳು ಇಂದಿಗೂ ನಮಗೆ ಪ್ರೇರಣೆ ಎಂದು ಅಭಿಮಾನಿಗಳು ಈ ಸಂದರ್ಭದಲ್ಲಿ ಭಾವುಕರಾಗಿ ನುಡಿದರು.

Read More
Next Story