
ಇಂದು ಭಾರತೀಯ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿರುವ ರಿಷಬ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ
ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಜನ್ಮದಿನದ ವಿಶೇಷ ಲೇಖನ. ಚಿತ್ರರಂಗಕ್ಕೆ ಬರುವ ಮುನ್ನ ಚಹಾ ಪುಡಿ ಮಾರಿ, ಡ್ರೈವರ್ ಆಗಿ ಕೆಲಸ ಮಾಡಿದ್ದ ನಟನ ರೋಚಕ ಸಿನಿಮಾ ಜರ್ನಿಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇಂದು ಭಾರತೀಯ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿರುವ ರಿಷಬ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಇಂದು ಅವರು ತಲುಪಿರುವ ಯಶಸ್ಸಿನ ಶಿಖರದ ಹಿಂದಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. 'ಕಾಂತಾರ' ಚಿತ್ರದ ಭರ್ಜರಿ ಯಶಸ್ಸಿನ ಮೂಲಕ ದೇಶಾದ್ಯಂತ ಮನೆಮಾತಾಗುವ ಮುನ್ನ, ರಿಷಬ್ ಶೆಟ್ಟಿ ಅವರು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹಲವು ವರ್ಷಗಳ ಕಾಲ ತೀವ್ರ ಕಷ್ಟದ ದಿನಗಳನ್ನು ಎದುರಿಸಬೇಕಾಯಿತು.
ತಮ್ಮ ಹಳೆಯ ದಿನಗಳ ಹೋರಾಟದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಿಷಬ್ ಶೆಟ್ಟಿ, ಸಿನಿಮಾದಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದ ದಿನಗಳಲ್ಲಿ ಜೀವನ ಸಾಗಿಸಲು ತಾವು ಚಹಾ ಪುಡಿ ಮತ್ತು ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗಿ ಹಂಚಿಕೊಂಡಿದ್ದರು. ಇದರೊಂದಿಗೆ ಅವರು ಸೋಲಾರ್ ಉತ್ಪನ್ನಗಳ ಮಾರ್ಕೆಟಿಂಗ್ ಕೆಲಸವನ್ನೂ ಸಹ ಮಾಡಿದ್ದರು. ಇನ್ನು ಮುಂಬೈಗೆ ತೆರಳಿದ್ದ ಆರಂಭದ ದಿನಗಳಲ್ಲಿ ಅಲ್ಲಿನ ಪ್ರೊಡಕ್ಷನ್ ಹೌಸ್ ಒಂದರಲ್ಲಿ ಆಫೀಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಅವರು, ಅಂಧೇರಿ ವೆಸ್ಟ್‌ನಲ್ಲಿ ಚಿತ್ರ ನಿರ್ಮಾಪಕರೊಬ್ಬರ ಕಾರು ಚಾಲಕರಾಗಿಯೂ ಕೆಲಸ ನಿರ್ವಹಿಸಿದ್ದರು.
ಬೆಂಗಳೂರಿನ ಗೌರ್ನಮೆಂಟ್ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿಮಾ ಬಗ್ಗೆ ಕಲಿಯುತ್ತಿದ್ದಾಗ ಅವರಲ್ಲಿ ಚಿತ್ರನಿರ್ಮಾಣದ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಸಿನಿಮಾ ಶಿಕ್ಷಣದ ಜೊತೆಯಲ್ಲೇ ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದೊಂದಿಗೆ ಅವರು ಸದಾ ನಿಕಟ ಸಂಪರ್ಕ ಹೊಂದಿದ್ದರು. ಇದೇ ಯಕ್ಷಗಾನದ ಪ್ರಭಾವವು ಮುಂದೆ ಅವರು 'ಕಾಂತಾರ'ದಂತಹ ಅದ್ಭುತ ಚಿತ್ರವನ್ನು ಸೃಷ್ಟಿಸಲು ಪ್ರಮುಖ ಕಾರಣವಾಯಿತು.
ವರ್ಷಗಳ ಕಾಲ ರಿಷಬ್ ಶೆಟ್ಟಿ ಅವರು ಪಟ್ಟ ಶ್ರಮಕ್ಕೆ 'ಕಾಂತಾರ' ಚಿತ್ರದ ಮೂಲಕ ದೊಡ್ಡ ಯಶಸ್ಸು ಸಿಕ್ಕಿತು. ಈ ಸಿನಿಮಾ ಕೇವಲ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಷ್ಟೇ ಅಲ್ಲದೆ, ವಿಮರ್ಶಕರಿಂದಲೂ ಅಪಾರ ಪ್ರಶಂಸೆ ಗಳಿಸಿತು. ಸದ್ಯ ಈ ಯಶಸ್ಸಿನ ಸರಣಿ 'ಕಾಂತಾರ: ಚಾಪ್ಟರ್ 1' ಚಿತ್ರದ ಮೂಲಕ ಮುಂದುವರಿದಿದ್ದು, ಈ ಹೊಸ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 86.79 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಚಿತ್ರರಂಗದ ಯಶಸ್ಸಿನ ಹೊರತಾಗಿ ರಿಷಬ್ ಶೆಟ್ಟಿ ಅವರು ವೈಯಕ್ತಿಕ ಜೀವನವನ್ನು ತುಂಬಾ ಸರಳವಾಗಿ ಇಟ್ಟುಕೊಂಡಿದ್ದಾರೆ. 2017ರಲ್ಲಿ ಪ್ರಗತಿ ಶೆಟ್ಟಿ ಅವರೊಂದಿಗೆ ಸಾಂಪ್ರದಾಯಿಕ ಬಂಟ್ಸ್ ಶೈಲಿಯಲ್ಲಿ ಇವರ ವಿವಾಹ ನಡೆದಿತ್ತು. ಪ್ರಗತಿ ಅವರು ಕೇವಲ ರಿಷಬ್ ಅವರ ವೈಯಕ್ತಿಕ ಜೀವನದ ಶಕ್ತಿಯಾಗಿರದೆ, ಫ್ಯಾಷನ್ ಸ್ಟೈಲಿಸ್ಟ್ ಹಾಗೂ ಕಾಸ್ಟ್ಯೂಮ್ ಡಿಸೈನರ್ ಆಗಿ 'ಕಾಂತಾರ' ಸರಣಿಯ ಚಿತ್ರಗಳಿಗೆ ತಮ್ಮ ಸೃಜನಶೀಲ ಕೊಡುಗೆ ನೀಡಿದ್ದಾರೆ. ಈ ದಂಪತಿಗೆ ರಣ್ವಿತ್ ಮತ್ತು ರಾಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಇನ್ನು ತಮ್ಮ ಹುಟ್ಟುಹಬ್ಬದ ಅಂಗವಾಗಿ ರಿಷಬ್ ಶೆಟ್ಟಿ ಅವರು ಕುಟುಂಬಸ್ಥರು ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ತಮ್ಮ ಮುದ್ದಿನ ಮಗಳು ರಾಧ್ಯಾ ಹಾಗೂ ಪತ್ನಿ ಪ್ರಗತಿ ಅವರಿಗೆ ಕೇಕ್ ತಿನ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ.

