
ನಟ ದಿಗಂತ್ ಮತ್ತು ಹೆಬಾ ಪಟೇಲ್ ನಟನೆಯ 'ರುದ್ರ ಕಾಲ' ಚಿತ್ರಕ್ಕೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ.
Actor Diganth| ದಿಗಂತ್ ನಟನೆಯ 'ರುದ್ರ ಕಾಲ' ಚಿತ್ರಕ್ಕೆ ಅದ್ಧೂರಿ ಮುಹೂರ್ತ
ನಟ ದಿಗಂತ್ ಮತ್ತು ಹೆಬಾ ಪಟೇಲ್ ನಟನೆಯ 'ರುದ್ರ ಕಾಲ' ಚಿತ್ರಕ್ಕೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ. ಯೋಗರಾಜ್ ಭಟ್ ಶುಭ ಹಾರೈಸಿದ್ದಾರೆ.
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ದಿಗಂತ್ ಅಭಿನಯದ ನೂತನ ಚಿತ್ರ ‘ರುದ್ರ ಕಾಲ’ ಚಿತ್ರದ ಮುಹೂರ್ತ ಸಮಾರಂಭವು ಬುಧವಾರ ಬೆಳಗ್ಗೆ ಕೆಂಪೇಗೌಡ ನಗರದ ಪ್ರಸಿದ್ಧ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರೆ, ನಿರ್ದೇಶಕ ರಾಜ್ ಗುರು ಅವರು ಕ್ಯಾಮೆರಾ ಚಾಲನೆ ಮಾಡಿದರು.
ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ ನಿರ್ದೇಶಕ ದ್ವಯರು, ‘ರುದ್ರ ಕಾಲ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಮುಹೂರ್ತದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಿನಿಮಾದ ಕುರಿತು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡರು.
ನಿರ್ದೇಶಕ ಗೋಪಿ ಅವರು ಮಾತನಾಡಿ, ಇದು ತಮ್ಮ ನಿರ್ದೇಶನದ ನಾಲ್ಕನೇ ಚಿತ್ರವಾಗಿದ್ದು, ಈಗಾಗಲೇ ತೆಲುಗಿನಲ್ಲಿ ಎರಡು ಹಾಗೂ ಕನ್ನಡದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿರುವುದಾಗಿ ತಿಳಿಸಿದರು. ‘ರುದ್ರ ಕಾಲ’ ಚಿತ್ರವು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಮತ್ತು ಕೌಟುಂಬಿಕ ಭಾವನೆಗಳ ಸಂಗಮದ ಕಥಾಹಂದರವನ್ನು ಹೊಂದಿದೆ. ವಿಶೇಷವೆಂದರೆ, ಇತ್ತೀಚೆಗಷ್ಟೇ ಸ್ಟಾರ್ ನಟಿ ಸಮಂತಾ ಈ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದರು. ನಿರ್ಮಾಪಕ ರಮೇಶ್ ನಾಯ್ಕ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ಮೇ ತಿಂಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ನಾಯಕ ನಟ ದಿಗಂತ್ ಮಾತನಾಡಿ, ಈ ಚಿತ್ರದಲ್ಲಿ ತಾವು ಇದುವರೆಗೆ ಮಾಡಿರದ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಚಿತ್ರರಂಗದ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಧೈರ್ಯ ಮಾಡಿ ಈ ಪ್ರಾಜೆಕ್ಟ್ ಆರಂಭಿಸಿರುವ ನಿರ್ಮಾಪಕ ರಮೇಶ್ ನಾಯ್ಕ್ ಅವರಿಗೆ ಮೆಚ್ಚುಗೆ ಸೂಚಿಸಿದರು. ನಿರ್ದೇಶಕ ಗೋಪಿ ಅವರು ಕಥೆ ವಿವರಿಸಿದಾಗಲೇ ತಮಗೆ ಬಹಳ ಇಷ್ಟವಾಯಿತು ಎಂದು ದಿಗಂತ್ ಸಂತಸ ವ್ಯಕ್ತಪಡಿಸಿದರು. ಹತ್ತು ವರ್ಷಗಳ ಹಿಂದೆ ‘ಅಧ್ಯಕ್ಷ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಹೆಬಾ ಪಟೇಲ್ ಈ ಚಿತ್ರದ ಮೂಲಕ ಮತ್ತೆ ಚಂದನವನಕ್ಕೆ ಮರಳಿದ್ದು, ಅಂದು ನೀಡಿದ ಪ್ರೋತ್ಸಾಹವನ್ನೇ ಪ್ರೇಕ್ಷಕರು ಇಂದೂ ನೀಡಬೇಕೆಂದು ಮನವಿ ಮಾಡಿದರು.
ಚಿತ್ರವನ್ನು ರಮೇಶ್ ನಾಯ್ಕ್ ನಿರ್ಮಿಸುತ್ತಿದ್ದು, ರಂಜಿತಾ ನವೀನ್ ಸಹ-ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ನಟಿ ವಂಶಿ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ, ರುದ್ರ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಚನ್ನಯ್ಯ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ಶಿವರಾಜ್ ಸೇರಿದಂತೆ ಚಿತ್ರದ ಪ್ರಮುಖ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.

