
ಬೆಂಗಳೂರಿನ ಕಾಲ್ಪನಿಕ ಭೂಗತ ಲೋಕದ ಹಿನ್ನೆಲೆಯಲ್ಲಿ ಮೂಡಿಬಂದಿರುವ ನಟ ಡಾಲಿ ಧನಂಜಯ್ ಮುಖ್ಯ ಭೂಮಿಕೆಯ 'ಮದರ್ ಪ್ರಾಮಿಸ್' ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.
ಡಾಲಿ ಧನಂಜಯ್ 'ಮದರ್ ಪ್ರಾಮಿಸ್' ಚಿತ್ರಕ್ಕೆ ವಿದೇಶದಲ್ಲಿ ಭರ್ಜರಿ ರೆಸ್ಪಾನ್ಸ್
ಡಾಲಿ ಧನಂಜಯ್ ಅಭಿನಯದ 'ಮದರ್ ಪ್ರಾಮಿಸ್' ಚಿತ್ರದ ಸೆನ್ಸಾರ್ ಪ್ರತಿ ವೀಕ್ಷಿಸಿರುವ ವಿದೇಶಿ ವಿತರಕರು ಸಿನಿಮಾ ಸೂಪರ್ ಹಿಟ್ ಆಗಲಿದ್ದು, ಇದೊಂದು ಪಕ್ಕಾ ಕಾಮಿಡಿ ಎಂಟರ್ಟೈನರ್ ಎಂದು ಹೊಗಳಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಮದರ್ ಪ್ರಾಮಿಸ್' ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಜುಲೈ 10 ರಂದು ವಿಶ್ವಾದ್ಯಂತ ತೆರೆಕಾಣಲಿರುವ ಈ ಚಿತ್ರದ ಸೆನ್ಸಾರ್ ಪ್ರತಿಯನ್ನು ವೀಕ್ಷಿಸಿರುವ ವಿದೇಶಿ ವಿತರಕರು ಸಿನಿಮಾದ ಬಗ್ಗೆ ಮೊದಲ ವಿಮರ್ಶೆಯನ್ನು ಹಂಚಿಕೊಂಡಿದ್ದು, ಚಿತ್ರಕ್ಕೆ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರದ ಓವರ್‌ಸೀಸ್ ವಿತರಕರಾದ 'ಡ್ರೀಮ್ ಸ್ಕ್ರೀನ್ಸ್ ಇಂಟರ್ನ್ಯಾಷನಲ್' ಸಂಸ್ಥೆಯು ಸಿನಿಮಾವನ್ನು ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
"ಮದರ್ ಪ್ರಾಮಿಸ್ ಚಿತ್ರದ ಸೆನ್ಸಾರ್ ಪ್ರತಿಯನ್ನು ಈಗಷ್ಟೇ ವೀಕ್ಷಿಸಿದೆವು. ಸಿನಿಮಾ ಅದ್ಭುತವಾಗಿದೆ! ಇದೊಂದು ಕಂಪ್ಲೀಟ್ ಮನರಂಜನೆಯ ಪ್ಯಾಕೇಜ್ ಆಗಿದ್ದು, ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸಲಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಕಾಮಿಡಿ, ಎಂಟರ್‌ಟೈನ್‌ಮೆಂಟ್ ಮತ್ತು ಹೈ-ವೋಲ್ಟೇಜ್ ಡ್ರಾಮಾಗೆ ಯಾವುದೇ ಕೊರತೆಯಿಲ್ಲ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಇದೊಂದು ಅತ್ಯಂತ ಭರವಸೆಯ ಪ್ರಯತ್ನವಾಗಿದೆ. ಸಿನಿಮಾ ಖಂಡಿತವಾಗಿಯೂ ಬ್ಲಾಕ್‌ಬಸ್ಟರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜುಲೈ 10 ರಿಂದ ಚಿತ್ರಮಂದಿರಗಳಲ್ಲಿ ಮಿಸ್ ಮಾಡದೇ ವೀಕ್ಷಿಸಿ" ಎಂದು ವಿತರಕರು ಬರೆದುಕೊಂಡಿದ್ದಾರೆ.
ಏನಿದು ಸಿನಿಮಾದ ಕಥೆ?
ಬೆಂಗಳೂರಿನ ಭೂಗತ ಲೋಕದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಕ್ರೈಮ್, ಕಾಮಿಡಿ ಹಾಗೂ ಕೌಟುಂಬಿಕ ಭಾವನೆಗಳ ಸಂಗಮವಾಗಿದೆ. ಜೂಜಾಟದ ಚಟಕ್ಕೆ ಬಿದ್ದು ಎಲ್ಲವನ್ನೂ ಕಳೆದುಕೊಳ್ಳುವ ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆಯುವ ರೋಚಕ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾಹಂದರ. ಮುಖ್ಯವಾಗಿ ಗ್ಯಾಂಗ್‌ಸ್ಟರ್ ಕಾಮಿಡಿಯೊಂದಿಗೆ ತಾಯಿ-ಮಗನ ನಡುವಿನ ಭಾವುಕ ಸಂಬಂಧವನ್ನು ಈ ಚಿತ್ರದಲ್ಲಿ ಅತ್ಯಂತ ರೋಚಕವಾಗಿ ಕಟ್ಟಿಕೊಡಲಾಗಿದೆ.
ಈ ಚಿತ್ರವನ್ನು ಪೂರ್ಣಚಂದ್ರ ಮೈಸೂರು ಅವರು ನಿರ್ದೇಶಿಸಿದ್ದು, ಮಹದೇವ್ ಪ್ರಸಾದ್ ಹಾಗೂ ಅರುಣ್ ಭರಮಣ್ಣವರ್ ಅವರೊಂದಿಗೆ ಸೇರಿ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್ ಅವರೊಂದಿಗೆ ಪೂರ್ಣಚಂದ್ರ ಮೈಸೂರು (ರ‍್ಯಾಂಡಿ ಪಾತ್ರದಲ್ಲಿ), ಹಿರಿಯ ನಟಿ ವಿನಯಾ ಪ್ರಸಾದ್ (ಶಾರದಮ್ಮನ ಪಾತ್ರದಲ್ಲಿ), ಗೀತಾ (ಅಮ್ಮನ ಪಾತ್ರದಲ್ಲಿ), ನಾಗಭೂಷಣ್ ಎನ್.ಎಸ್, ಚಿ ಗುರುದತ್ ಹಾಗೂ ಮಹದೇವ್ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ವಿದೇಶಿ ವಿತರಕರಿಂದ ಬಂದಿರುವ ಈ ಆರಂಭಿಕ ವಿಮರ್ಶೆಯು ಡಾಲಿ ಧನಂಜಯ್ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಝಲಕ್ ನೋಡಿದ ನೆಟ್ಟಿಗರು, ಸಿನಿಮಾ 'ಕಿರಿಕ್ ಪಾರ್ಟಿ' ಚಿತ್ರದ ತರಹದ ಸಖತ್ ವೈಬ್ಸ್ ನೀಡುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಜುಲೈ 10 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

