
ನಟಿ ಗೀತಪ್ರಿಯ ಅಭಿನಯದ 'ಅಪರಿಚಿತೆ' ಚಿತ್ರದ ಸಕ್ಸಸ್ ಮೀಟ್ನಲ್ಲಿ ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ 50 ಸಾವಿರ ರೂ. ಧನಸಹಾಯ ನೀಡಿ ಗೌರವಿಸಲಾಯಿತು.
ಅಪರಿಚಿತೆ ಚಿತ್ರದ ಸಕ್ಸಸ್ ಮೀಟ್: ಆಸಿಡ್ ದಾಳಿ ಸಂತ್ರಸ್ತರಿಗೆ ಆರ್ಥಿಕ ನೆರವು
ನಟಿ ಗೀತಪ್ರಿಯ ಅಭಿನಯದ 'ಅಪರಿಚಿತೆ' ಚಿತ್ರದ ಸಕ್ಸಸ್ ಮೀಟ್ನಲ್ಲಿ ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ 50 ಸಾವಿರ ರೂ. ಧನಸಹಾಯ ನೀಡಿ ಗೌರವಿಸಲಾಯಿತು. ಮೇಘನಾ ರಾಜ್ ಮುಖ್ಯ ಅತಿಥಿಯಾಗಿದ್ದರು.
ಸಿನಿಮಾ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ನೋವಿಗೆ ಮಿಡಿಯುವ ಕನ್ನಡಿಯಾಗಬೇಕು ಎಂಬುದನ್ನು ‘ಅಪರಿಚಿತೆ’ ಚಿತ್ರತಂಡ ಸಾಬೀತುಪಡಿಸಿದೆ. ಇತ್ತೀಚೆಗಷ್ಟೇ ತೆರೆಕಂಡು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರದ ಯಶಸ್ಸನ್ನು, ನಿರ್ಮಾಪಕ ಸುರೇಶ್ ಕುಮಾರ್ ಹಾಗೂ ನಟಿ ಗೀತಪ್ರಿಯ ಅವರು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಸಾಮಾನ್ಯವಾಗಿ ಸಕ್ಸಸ್ ಮೀಟ್ ಎಂದರೆ ಪಟಾಕಿ, ಕೇಕ್ ಕತ್ತರಿಸುವ ಸಂಭ್ರಮವಿರುತ್ತದೆ. ಆದರೆ ‘ಅಪರಿಚಿತೆ’ ತಂಡವು ಚಿತ್ರದ ಗಳಿಕೆಯ ಹಣದಲ್ಲಿ ಆಸಿಡ್ ದಾಳಿಗೆ ತುತ್ತಾಗಿ ಸಮಾಜದಲ್ಲಿ ಧೈರ್ಯದಿಂದ ಬದುಕುತ್ತಿರುವ ಮೂವರು ಮಹಿಳೆಯರಿಗೆ ತಲಾ 50 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ, ಗೌರವ ಸಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಈ ಭಾವನಾತ್ಮಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟಿ ಮೇಘನಾ ರಾಜ್ ಅವರು ಸಂತ್ರಸ್ತ ಮಹಿಳೆಯರಿಗೆ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಸಂತ್ರಸ್ತ ಮಹಿಳೆಯರ ಹೋರಾಟದ ಕಥೆ ಕೇಳಿ ನನ್ನ ಕಣ್ಣುಗಳು ತೇವವಾದವು. ಆದರೆ ಅವರ ಮುಖದಲ್ಲಿನ ಆತ್ಮವಿಶ್ವಾಸ ಕಂಡು ನನ್ನಲ್ಲಿ ಧೈರ್ಯ ಇಮ್ಮಡಿಯಾಯಿತು. ಗೀತಪ್ರಿಯ ಅವರು ಕೇವಲ ಸಿನಿಮಾ ಮಾಡುವುದಲ್ಲದೆ, ಸಮಾಜಕ್ಕೆ ಮಾದರಿಯಾಗುವ ಇಂತಹ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ," ಎಂದು ಶ್ಲಾಘಿಸಿದರು.
ನಟಿ ಗೀತಪ್ರಿಯ ಅವರು ಈ ಹಿಂದೆ ತಮ್ಮ ‘ತಾಯವ್ವ’ ಚಿತ್ರದ ಯಶಸ್ಸಿನ ಸಂದರ್ಭದಲ್ಲಿ ಗರ್ಭಿಣಿಯರನ್ನು ಸನ್ಮಾನಿಸಿ ಗಮನ ಸೆಳೆದಿದ್ದರು. ಈಗ ‘ಅಪರಿಚಿತೆ’ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. "ನಮ್ಮ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ, ಆ ಗಳಿಕೆಯ ಹಣ ಸಂಕಷ್ಟದಲ್ಲಿರುವವರಿಗೆ ಅಲ್ಪಮಟ್ಟಿಗಾದರೂ ನೆರವಾಗಲಿ ಎಂಬುದು ನಮ್ಮ ಆಶಯ. ಮುಂದೆಯೂ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಸದಭಿರುಚಿಯ ಹಾಗೂ ಸಮಾಜಮುಖಿ ಚಿತ್ರಗಳೇ ಬರುತ್ತವೆ," ಎಂದು ಗೀತಪ್ರಿಯ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶ್ರೀನಾಥ್, ಸುರೇಶ್ ಹೆಬ್ಳೀಕರ್ ಹಾಗೂ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಉಪಸ್ಥಿತರಿದ್ದು, ಚಿತ್ರತಂಡದ ಈ ಮಾನವೀಯ ಕಾರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದರು. ಅಮರ ಫಿಲಂಸ್ ನಿರ್ಮಾಣದ, ವಿಶ್ವನಾಥ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಾಥ್ ಅವರ ಪುತ್ರ ರೋಹಿತ್, ಸಿಂಧೂ ಲೋಕನಾಥ್ ಹಾಗೂ ಆರ್.ಜೆ. ನಿಖಿತಾ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

