
ನಟ ದಿಲೀಪ್ ರಾಜ್ ಅಂತ್ಯಕ್ರಿಯೆ ರಾಮನಗರ ಜಿಲ್ಲೆಯ ಗುನ್ನೂರು ಗ್ರಾಮದ ತಮ್ಮ ನೆಚ್ಚಿನ ತೋಟದಲ್ಲಿ ನಡೆಯಿತು.
ನೆಚ್ಚಿನ ತೋಟದ ಮನೆಯಲ್ಲೇ 'ಹಿಟ್ಲರ್ ಕಲ್ಯಾಣ'ದ ಎಜೆ ಲೀನ: ಕಂಬನಿ ಮಿಡಿದ ಕಿರುತೆರೆ ಲೋಕ!
ದಿಲೀಪ್ ರಾಜ್ ಅವರಿಗೆ ರಾಮನಗರದ ತೋಟದ ಮನೆ ಎಂದರೆ ಬಹಳ ಪ್ರೀತಿ. ಹಳೆಯ ಶೈಲಿಯ ತೊಟ್ಟಿ ಮನೆಯನ್ನು ನಿರ್ಮಿಸಿಕೊಂಡಿದ್ದ ಅವರು, ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಬಂದು ಗ್ರಾಮಸ್ಥರೊಂದಿಗೆ ಸಮಯ ಕಳೆಯುತ್ತಿದ್ದರು.
ಹೃದಯಾಘಾತದಿಂದ ನಿಧನರಾದ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ (47) ಅವರ ಅಂತ್ಯಕ್ರಿಯೆಯು ರಾಮನಗರ ತಾಲೂಕಿನ ಗುನ್ನೂರು ಬಳಿಯ ಅವರ ನೆಚ್ಚಿನ ಫಾರ್ಮ್ ಹೌಸ್‌ನಲ್ಲಿ ಗುರುವಾರ ನೆರವೇರಿತು. ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಪೂರೈಸಿ, ಅವರ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಯಿತು.
ದಿಲೀಪ್ ರಾಜ್ ಅವರಿಗೆ ರಾಮನಗರದ ತೋಟದ ಮನೆ ಎಂದರೆ ಬಹಳ ಪ್ರೀತಿ. ಹಳೆಯ ಶೈಲಿಯ ತೊಟ್ಟಿ ಮನೆಯನ್ನು ನಿರ್ಮಿಸಿಕೊಂಡಿದ್ದ ಅವರು, ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಬಂದು ಗ್ರಾಮಸ್ಥರೊಂದಿಗೆ ಸಮಯ ಕಳೆಯುತ್ತಿದ್ದರು. ಹೀಗಾಗಿ ಅವರ ಇಚ್ಛೆಯಂತೆಯೇ ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ದಿಲೀಪ್ ರಾಜ್ ಅವರ ಅಣ್ಣನ ಮಗ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಕಂಬನಿ ಮಿಡಿದ ಕಲಾಬಂಧುಗಳು
ಅಂತ್ಯಕ್ರಿಯೆಯಲ್ಲಿ ನಟ ಸೃಜನ್ ಲೋಕೇಶ್, ಅನು ಪ್ರಭಾಕರ್, ರಘು ಮುಖರ್ಜಿ, ಮಂಜು ಪಾವಗಡ, ಜಗಪ್ಪ, ಹುಲಿ ಕಾರ್ತಿಕ್ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆಯ ಹಲವು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಪತಿ ಮತ್ತು ತಂದೆಯನ್ನು ಕಳೆದುಕೊಂಡ ಪತ್ನಿ ಹಾಗೂ ಮಕ್ಕಳ ಆಕ್ರಂದನ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು.
ದಿಲೀಪ್ ರಾಜ್ ಸಿನಿಮಾ ಜರ್ನಿ
2005ರಲ್ಲಿ 'ಬಾಯ್‌ಫ್ರೆಂಡ್' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಪುನೀತ್ ರಾಜ್‌ಕುಮಾರ್ ಅಭಿನಯದ 'ಮಿಲನ' ಚಿತ್ರದ ಖಳನಾಯಕನ ಪಾತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತು. ನಂತರ, ಸುಗ್ರೀವ, ಗೆಳೆಯ, ಯೂಟರ್ನ್ ಸೇರಿದಂತೆ ಸುಮಾರು 28 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೊನೆಯ ಚಿತ್ರ 'ಲವ್ ಮಾಕ್ಟೇಲ್ 3'.
ಕಿರುತೆರೆ ಸಾಧನೆ
'ಜನನಿ', 'ರಥಸಪ್ತಮಿ', 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಗಳ ಮೂಲಕ ನಟ ದಿಲೀಪ್ ರಾಜ್ ಮನೆಮಾತಾಗಿದ್ದರು. ಇತ್ತೀಚೆಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಎಜೆ (AJ) ಪಾತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಯಶಸ್ವಿ ನಟರಾಗಿದ್ದ ಅವರು 'ಕೃಷ್ಣ ರುಕ್ಕು' ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

