ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ?
x

ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು?

ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ?

ನಟಿ ಶುಭಾ ಪೂಂಜಾ ಹಾಗೂ ಸುಮಂತ್ ಬಿಲ್ಲವ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಮದುವೆಯಾದ 4 ವರ್ಷಕ್ಕೆ ಪರಸ್ಪರ ಒಪ್ಪಿಗೆಯ ಮೇರೆಗೆ ಫ್ಯಾಮಿಲಿ ಕೋರ್ಟ್‌ಗೆ ಡಿವೋರ್ಸ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.


Click the Play button to hear this message in audio format

ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ತಮ್ಮ ಬಹುಕಾಲದ ಗೆಳೆಯ, ಮಂಗಳೂರು ಮೂಲದ ಉದ್ಯಮಿ ಸುಮಂತ್ ಬಿಲ್ಲವ ಅವರೊಂದಿಗೆ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ, ಇದೀಗ ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು, ಗುರುವಾರ ವಿಚಾರಣೆಗಾಗಿ ಕೋರ್ಟ್‌ಗೆ ಆಗಮಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನವರಿ 5, 2022 ರಂದು ಮಂಗಳೂರಿನ ಮಜಲುಬೆಟ್ಟು ಬೀಡಿನಲ್ಲಿ ಈ ಜೋಡಿ ಅತ್ಯಂತ ಸರಳವಾಗಿ ಮದುವೆಯಾಗಿತ್ತು. ಕ್ಯೂಟ್ ಕಪಲ್ ಎಂದೇ ಗುರುತಿಸಿಕೊಂಡಿದ್ದ ಈ ದಂಪತಿಯ ಸಂಸಾರದಲ್ಲಿ ಇದೀಗ ಬಿರುಗಾಳಿ ಎದ್ದಿರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ. ಆದರೆ, ಈ ಡಿವೋರ್ಸ್ ಸುದ್ದಿಯ ಹಿಂದಿನ ಸತ್ಯಾಸತ್ಯತೆ ಬಗ್ಗೆ ಸದ್ಯ ಗೊಂದಲಗಳಿದ್ದು, ನಟಿ ಶುಭಾ ಪೂಂಜಾ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಮಂಗಳೂರಿನ ತುಳುವ ಕುಟುಂಬದಲ್ಲಿ ಜನಿಸಿ ಬೆಂಗಳೂರಿನಲ್ಲೇ ಬೆಳೆದು ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಶುಭಾ ಪೂಂಜಾ, ಮಾಡೆಲಿಂಗ್ ಲೋಕದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. 2003ರಲ್ಲಿ 'ಮಿಸ್ ಚೆನ್ನೈ ಟಾಪ್ ಮಾಡೆಲ್' ಟೈಟಲ್ ಗೆದ್ದಿದ್ದ ಇವರು, 2004 ರ ತಮಿಳಿನ 'ಮಚಿ' ಚಿತ್ರದ ಮೂಲಕ ನಟನೆ ಆರಂಭಿಸಿದರು. ತದನಂತರ 2006 ರಲ್ಲಿ 'ಜಾಕ್‌ಪಾಟ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಮುಂದೆ ಅವರು ನಟಿಸಿದ 'ಚಂಡ' ಮತ್ತು 'ಮೊಗ್ಗಿನ ಮನಸ್ಸು' ಚಿತ್ರಗಳು ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟವು. ಆ ಬಳಿಕ ಸ್ಲಮ್ ಬಾಲ, ಕಂಠೀರವ, ಜೈ ಮಾರುತಿ 800 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದರು.

ಚಿತ್ರಗಳಷ್ಟೇ ಅಲ್ಲದೆ, ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಜನಮನ ಗೆದ್ದಿದ್ದ ಶುಭಾ ಪೂಂಜಾ, ಅದಾದ ನಂತರವೂ ಹಲವು ರಿಯಾಲಿಟಿ ಶೋಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ಸಂಸಾರ ಈಗ ಕೋರ್ಟ್ ಮೆಟ್ಟಿಲೇರಿರುವುದು ಸ್ಯಾಂಡಲ್‌ವುಡ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read More
Next Story