
ನಟಿ ರುಕ್ಮಿಣಿ ವಸಂತ್
ನಟಿ ರುಕ್ಮಿಣಿ ವಸಂತ್ ಡೀಪ್‌ಫೇಕ್ ಪ್ರಕರಣ: 29 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್!
ರುಕ್ಮಿಣಿ ವಸಂತ್ ಅವರ ದೂರು ಆಧರಿಸಿ ಕಣಕ್ಕಿಳಿದಿರುವ ಸೈಬರ್ ಪೊಲೀಸರು, ವಿಡಿಯೋ ಹಂಚಿಕೊಂಡ ಹಾಗೂ ವೈರಲ್ ಮಾಡಿದ ಒಟ್ಟು 29 ಸಾಮಾಜಿಕ ಜಾಲತಾಣ ಖಾತೆಗಳನ್ನು ಪತ್ತೆಹಚ್ಚಿ ಮೊಕದ್ದಮೆ ಹೂಡಿದ್ದಾರೆ.
ಸ್ಯಾಂಡಲ್‌ವುಡ್‌ನ ನಟಿ ರುಕ್ಮಿಣಿ ವಸಂತ್ ಅವರ ನಕಲಿ ಬಿಕಿನಿ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಕ್ರಮಕೈಗೊಂಡಿದ್ದಾರೆ. ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಫೇಕ್ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ತಮ್ಮ ಚಾರಿತ್ರ್ಯ ಹರಣಕ್ಕೆ ಯತ್ನಿಸಲಾಗಿದೆ ಎಂದು ನಟಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಅಶ್ಲೀಲ ವಿಡಿಯೋವೊಂದು ಹರಿದಾಡುತ್ತಿತ್ತು. ಇದು ಬೇರೊಬ್ಬರ ದೇಹಕ್ಕೆ ತಂತ್ರಜ್ಞಾನದ ಸಹಾಯದಿಂದ ನಟಿಯ ಮುಖವನ್ನು ಅತ್ಯಂತ ನಿಖರವಾಗಿ ಜೋಡಿಸಿ ಸೃಷ್ಟಿಸಲಾದ ನಕಲಿ ವಿಡಿಯೋ ಎಂದು ತಿಳಿದುಬಂದಿದೆ. ಈ ಕೃತ್ಯದಿಂದ ತಮಗೆ ತೀವ್ರ ಮುಜುಗರವಾಗಿದ್ದು, ಸಾರ್ವಜನಿಕವಾಗಿ ತಮ್ಮ ತೇಜೋವಧೆ ಮಾಡಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ನಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ನಟಿ ರುಕ್ಮಿಣಿ ವಸಂತ್
29 ಖಾತೆಗಳ ವಿರುದ್ಧ ಕಾನೂನು ಕ್ರಮ
ರುಕ್ಮಿಣಿ ವಸಂತ್ ಅವರ ದೂರು ಆಧರಿಸಿ ಕಣಕ್ಕಿಳಿದಿರುವ ಸೈಬರ್ ಪೊಲೀಸರು, ವಿಡಿಯೋ ಹಂಚಿಕೊಂಡ ಹಾಗೂ ವೈರಲ್ ಮಾಡಿದ ಒಟ್ಟು 29 ಸಾಮಾಜಿಕ ಜಾಲತಾಣ ಖಾತೆಗಳನ್ನು ಪತ್ತೆಹಚ್ಚಿ ಮೊಕದ್ದಮೆ ಹೂಡಿದ್ದಾರೆ. ಇದರಲ್ಲಿ. 9 ಇನ್‌ಸ್ಟಾಗ್ರಾಮ್ ಖಾತೆಗಳು, 14 ಎಕ್ಸ್ ಖಾತೆಗಳು, 6 ಫೇಸ್‌ಬುಕ್ ಪೇಜ್‌ಗಳು ಸೇರಿವೆ. ಕಿಡಿಗೇಡಿಗಳ ವಿರುದ್ಧ ಐಟಿ ಆ್ಯಕ್ಟ್ ಸೆಕ್ಷನ್ 66C, 66D ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75(3), 79, 336, 356, 351, 352 ಮತ್ತು 294ರ ಅಡಿಯಲ್ಲಿ ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಆತಂಕ ಮೂಡಿಸಿದ ಎಐ ತಂತ್ರಜ್ಞಾನ
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ದುರ್ಬಳಕೆ ಮಿತಿಮೀರುತ್ತಿದ್ದು, ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಸೃಷ್ಟಿಯಾಗುತ್ತಿರುವ ‘ಡೀಪ್‌ಫೇಕ್’ ವಿಡಿಯೋಗಳು ಚಿತ್ರರಂಗದಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ಈ ಹಿಂದೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಕೂಡ ಇದೇ ರೀತಿಯ ಸೈಬರ್ ದಾಳಿಗೆ ತುತ್ತಾಗಿದ್ದರು, ಆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ, ಹಿರಿಯ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್ ಹಾಕಿದ್ದವರನ್ನು ಪೊಲೀಸರು ಜೈಲಿಗಟ್ಟಿದ್ದರು.
"ಇದು ಕೇವಲ ಒಬ್ಬ ನಟಿಯ ಸಮಸ್ಯೆಯಲ್ಲ, ಇಡೀ ಸಮಾಜ ಮತ್ತು ಮಹಿಳೆಯರ ಸುರಕ್ಷತೆಗೆ ಎದುರಾಗಿರುವ ಎಐ ತಂತ್ರಜ್ಞಾನದ ದೊಡ್ಡ ಅಪಾಯ" ಎಂದು ಚಿತ್ರರಂಗದ ಪ್ರಮುಖರು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ರುಕ್ಮಿಣಿ ವಸಂತ್ ಪ್ರಕರಣದಲ್ಲೂ ಹಲವು ಕಿಡಿಗೇಡಿಗಳು ಶೀಘ್ರದಲ್ಲೇ ಪೊಲೀಸರ ಅತಿಥಿಯಾಗುವ ಸಾಧ್ಯತೆ ದಟ್ಟವಾಗಿದೆ.

