
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸುವ ಕೋರ್ಟ್ ಹಾಗೂ ಜಡ್ಜ್ ಬದಲಾವಣೆಯಾಗಲಿದೆ.
Actor Darshan| ದರ್ಶನ್ ಜಾಮೀನು ಅರ್ಜಿ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದ್ದು, ಸ್ಯಾಂಡಲ್‌ವುಡ್ ನಟನ ಭವಿಷ್ಯ ಇಂದು ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಂಟು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಈ ಮಹತ್ವದ ವಿಚಾರಣೆಯ ಸಂದರ್ಭದಲ್ಲಿ ದರ್ಶನ್ ಪರ ವಕೀಲರು ಪ್ರಮುಖವಾಗಿ ವಿಚಾರಣೆಯ ವಿಳಂಬದ ಬಗ್ಗೆ ವಾದ ಮಂಡಿಸಲಿದ್ದಾರೆ. ಒಟ್ಟು 273 ಸಾಕ್ಷಿಗಳ ಪೈಕಿ ಹತ್ತಕ್ಕಿಂತ ಕಡಿಮೆ ಜನರ ವಿಚಾರಣೆ ಮಾತ್ರ ಪೂರ್ಣಗೊಂಡಿರುವುದರಿಂದ, ಇಷ್ಟು ನಿಧಾನಗತಿಯ ಪ್ರಕ್ರಿಯೆಯ ಮಧ್ಯೆ ದರ್ಶನ್ ಅವರನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡುವುದು ಸರಿಯಲ್ಲ ಎಂಬುದು ಅವರ ವಾದವಾಗಿದೆ.
ಜೊತೆಗೆ ದರ್ಶನ್ ಅವರು ಜೈಲಿನ ವ್ಯವಸ್ಥೆಯ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ವಾರಂಟೈನ್ ಸೆಲ್‌ನಲ್ಲಿ ತಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಮತ್ತು ಸಹ-ಕೈದಿಗಳು ಪ್ರಚೋದನೆ ನೀಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರೂ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರಿನ ಕುರಿತು ಬೆಂಗಳೂರು ಪೊಲೀಸರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಸೆಷನ್ಸ್ ನ್ಯಾಯಾಲಯದಿಂದ ಸಮಗ್ರ ವರದಿಯನ್ನು ಕೇಳಿತ್ತು. ವಿಚಾರಣೆ ಮುಗಿಸಲು ಎಷ್ಟು ಸಮಯ ಬೇಕು ಮತ್ತು ದರ್ಶನ್ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡಲಾಗುತ್ತಿದೆಯೇ ಎಂಬ ಬಗ್ಗೆ ಇಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಲಿದೆ. ಈ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಲಿರುವ ಸರ್ವೋಚ್ಚ ನ್ಯಾಯಾಲಯವು, ದರ್ಶನ್ ಅವರಿಗೆ ಜಾಮೀನು ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಜೈಲು ವಾಸದ ಹಿನ್ನೆಲೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೂನ್ 11, 2024ರಂದು ಬಂಧನಕ್ಕೊಳಗಾಗಿದ್ದ ದರ್ಶನ್, 5 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಆ ಸಮಯದಲ್ಲಿ 'ಡೆವಿಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಆದರೆ, ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಪರಿಣಾಮ, ಕಳೆದ ವರ್ಷ ಆಗಸ್ಟ್ 14ರಂದು ಅವರು ಮತ್ತೆ ಜೈಲು ಸೇರಬೇಕಾಯಿತು.

