
'ಸೆಪ್ಟೆಂಬರ್ 21' ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದ ಸಿನಿಮಾ
Cannes Film Festival| ಕರಾವಳಿ ಪ್ರತಿಭೆಗೆ ಜಾಗತಿಕ ಮನ್ನಣೆ: ಕೇನ್ಸ್‌ಗೆ ಮಂಗಳೂರಿನ ಕರೆನ್ ನಿರ್ದೇಶನದ 'ಸೆಪ್ಟೆಂಬರ್ 21' ಆಯ್ಕೆ
ಮಂಗಳೂರು ಮೂಲದ 22 ವರ್ಷದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಚೊಚ್ಚಲ ಚಿತ್ರ 'ಸೆಪ್ಟೆಂಬರ್ 21' ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಜಾಗತಿಕ ಸಿನಿಮಾ ರಂಗದ ಅತ್ಯಂತ ಪ್ರತಿಷ್ಠಿತ ವೇದಿಕೆಯಾಗಿರುವ 'ಕೇನ್ಸ್ ಚಲನಚಿತ್ರೋತ್ಸವ'ದಲ್ಲಿ ಈ ಬಾರಿ ಕರಾವಳಿಯ ಪ್ರತಿಭೆಯೊಂದು ಬೆಳಗಿದೆ. ಮಂಗಳೂರು ಮೂಲದ ಕೇವಲ 22 ವರ್ಷದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಫೀಚರ್ ಫಿಲ್ಮ್ 'ಸೆಪ್ಟೆಂಬರ್ 21', ಪ್ರಸಕ್ತ ಸಾಲಿನ ಕೇನ್ಸ್‌ನ 'ಮಾರ್ಚೆ ಡು ಫಿಲ್ಮ್' ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗುವ ಮೂಲಕ ಕನ್ನಡಿಗರು ಹೆಮ್ಮೆಪಡುವಂತಹ ಸಾಧನೆ ಮಾಡಿದೆ. ಅತ್ಯುತ್ತಮ ಕಥಾಹಂದರವನ್ನು ಹೊಂದಿರುವ ಈ ಚಿತ್ರವು ಮುಂಬರುವ ಮೇ 16ರಂದು ಈ ಪ್ರತಿಷ್ಠಿತ ವೇದಿಕೆಯಲ್ಲಿ ವರ್ಲ್ಡ್ ಪ್ರೀಮಿಯರ್ ಕಾಣಲಿದೆ.
ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರವು 'ಆಲ್ಝೈಮರ್' (ಮರೆಗುಳಿತನ) ಕಾಯಿಲೆಯ ಸೂಕ್ಷ್ಮ ಎಳೆಯನ್ನು ಕಥಾವಸ್ತುವನ್ನಾಗಿ ಹೊಂದಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ತನ್ನ ಪತ್ನಿ ಪಕ್ಕದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾಳೆ ಎಂಬ ಭ್ರಮಾಲೋಕದಲ್ಲಿ ಬದುಕುವ ವೃದ್ಧ ರೋಗಿ ಹಾಗೂ ಅತಂತ್ರ ಸ್ಥಿತಿಗೆ ಸಿಲುಕುವ ಆತನ ಮಗನ ನಡುವಿನ ಬಿಕ್ಕಟ್ಟು ಮತ್ತು ಭಾವನಾತ್ಮಕ ಸಂಬಂಧವನ್ನು ಸಿನಿಮಾ ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದೆ. ಕೇವಲ ರೋಗದ ಬಾಧೆಯನ್ನಷ್ಟೇ ತೆರೆದಿಡದೆ, ಅಂತಹ ರೋಗಿಗಳನ್ನು ಅಹೋರಾತ್ರಿ ಉಪಚರಿಸುವ 'ಕೇರ್‌ಗಿವರ್‌ಗಳ' (ಆರೈಕೆದಾರರ) ಆಂತರಿಕ ತಲ್ಲಣಗಳು ಮತ್ತು ನಿತ್ಯದ ವೇದನೆಯನ್ನು ಈ ಚಿತ್ರ ಮನಮುಟ್ಟುವಂತೆ ಅನಾವರಣಗೊಳಿಸಿದೆ.
ತಮ್ಮ ಚೊಚ್ಚಲ ಪ್ರಯತ್ನಕ್ಕೆ ಸಿಕ್ಕ ಜಾಗತಿಕ ಮನ್ನಣೆಯ ಕುರಿತು ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ, "ನನ್ನ ಮೊದಲ ಫೀಚರ್ ಫಿಲ್ಮ್ ಕೇನ್ಸ್‌ನಂತಹ ಬೃಹತ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಇಡೀ ತಂಡದ ಶ್ರಮದ ಫಲ. ಸಿನಿಮಾ ಎಂದರೆ ಕೇವಲ ಮನರಂಜನೆಗೆ ಸೀಮಿತವಾಗದೆ, ಅದು ಸಮಾಜಕ್ಕೆ ಒಂದು ಮೌಲ್ಯಯುತ ಚಿಂತನೆಯನ್ನು ಬಿಟ್ಟು ಹೋಗಬೇಕು ಎಂಬ ಹಂಬಲ ನನ್ನದಾಗಿತ್ತು" ಎಂದು ಹೇಳಿದ್ದಾರೆ. ವಿಶೇಷವೆಂದರೆ, ಇದು ಕರೆನ್ ಅವರ ಎರಡನೇ ಕೇನ್ಸ್ ಪ್ರವೇಶವಾಗಿದೆ; ಈ ಹಿಂದೆ ಇವರು ನಿರ್ದೇಶಿಸಿದ್ದ 'ಹೈಡ್ ಅಂಡ್ ಸೀಕ್' ಎಂಬ ಕಿರುಚಿತ್ರವೂ ಇದೇ ವೇದಿಕೆಯಲ್ಲಿ ಪ್ರದರ್ಶನಗೊಂಡು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.
ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿರುವ ಬಹುಭಾಷಾ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೂ ಇದು ಸಂಭ್ರಮದ ಕ್ಷಣವಾಗಿದೆ. ಈ ಐತಿಹಾಸಿಕ ಕ್ಷಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಸಿನಿಮಾ ರಂಗದಲ್ಲಿ ಕಳೆದ ಮೂರು ದಶಕಗಳಿಂದ ನಾನು ಸಕ್ರಿಯಳಾಗಿದ್ದರೂ, ಇದೇ ಮೊದಲ ಬಾರಿಗೆ ನನ್ನ ನಟನೆಯ ಚಿತ್ರವೊಂದು ಕೇನ್ಸ್‌ಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿ ತಂದಿದೆ. ಇಂತಹ ಬೃಹತ್ ಜಾಗತಿಕ ವೇದಿಕೆಯು ಆಲ್ಝೈಮರ್ ರೋಗದ ಬಗ್ಗೆ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಖಂಡಿತವಾಗಿಯೂ ಸಹಕಾರಿಯಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಬಾಲಿವುಡ್‌ನ ಹಿರಿಯ ನಟಿ ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಾಯೆ ಮತ್ತು ಅಮಿತ್ ಬೆಹ್ಲ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಒಟ್ಟಾರೆಯಾಗಿ, ಓರ್ವ ಯುವ ನಿರ್ದೇಶಕಿಯ ಸಾಮಾಜಿಕ ಕಳಕಳಿಯ ಹೆಜ್ಜೆಗೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ದೊರೆತಿರುವುದು ಕನ್ನಡ ಚಿತ್ರರಂಗದ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ.

