
ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ 'ಸಾಹುಕಾರ್ ಜಾನಕಿ' ಇನ್ನಿಲ್ಲ: 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಬಹುಭಾಷಾ ತಾರೆ
ಸಾಹುಕಾರ್ ಜಾನಕಿ ಅವರಯು ವಯೋಸಹಜ ಆರೋಗ್ಯ ಸಮಸ್ಯೆಗಳು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿ, ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ (94) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿ, ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಚಿತ್ರರಂಗಕ್ಕೆ ಪದಾರ್ಪಣೆ ಮತ್ತು ಹೆಸರಿನ ಹಿನ್ನೆಲೆ
1931 ಡಿಸೆಂಬರ್ 12 ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಸಾಹುಕಾರ್ ಜಾನಕಿ ಅವರ ಮೂಲ ಹೆಸರು ಶಂಕರಮಂಚಿ ಜಾನಕಿ. 1950ರಲ್ಲಿ ಎನ್.ಟಿ. ರಾಮಾರಾವ್ ಅವರೊಂದಿಗೆ ನಟಿಸಿದ 'ಸಾಹುಕಾರ್' ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಮೊದಲ ಚಿತ್ರವೇ ಅತ್ಯಂತ ಜನಪ್ರಿಯತೆ ಗಳಿಸಿದ್ದರಿಂದ, ಅಂದಿನಿಂದ ಅವರು 'ಸಾಹುಕಾರ್ ಜಾನಕಿ' ಎಂದೇ ಖ್ಯಾತಿ ಪಡೆದರು.
ಕನ್ನಡ ಸೇರಿದಂತೆ ಬಹುಭಾಷಾ ನಟಿ
ಮೂಲತಃ ಕನ್ನಡಿಗರಾಗಿದ್ದ ಇವರು ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
• ಕನ್ನಡ ಸಿನಿಮಾಗಳು: ಕನ್ನಡದಲ್ಲಿ 'ಮಹಿಷಾಸುರ ಮರ್ದಿನಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಇವರು, 'ಸಾಕುಮಗಳು', 'ಕನ್ಯಾರತ್ನ', 'ಗೌರಿ', 'ರತ್ನಗಿರಿ ರಹಸ್ಯ', 'ನವಕೋಟಿ ನಾರಾಯಣ', 'ನಿರಪರಾಧಿ', 'ಮನಸಾಕ್ಷಿ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
• ವಿಶೇಷ ಪಾತ್ರಗಳು: ಡಾ. ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿಯೂ, ನಂತರ ಅವರ ಕೊನೆಯ ಚಿತ್ರವಾದ 'ಶಬ್ದವೇಧಿ'ಯಲ್ಲಿ ತಾಯಿಯ ಪಾತ್ರದಲ್ಲಿ ಹಾಗೂ 'ಅಭಿ' ಸಿನಿಮಾದಲ್ಲಿ ರಮ್ಯಾ ಅವರ ಅಜ್ಜಿಯಾಗಿ ಭಾವಪೂರ್ಣ ನಟನೆಯಿಂದ ಗಮನಸೆಳೆದಿದ್ದರು.
ತಮ್ಮ ಸುದೀರ್ಘ 7 ದಶಕಗಳ ಚಲನಚಿತ್ರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ 2022ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು. ನಟಿಯ ಅಗಲಿಕೆಗೆ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

