ಟೈಗರ್ ಶ್ರಾಫ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ  ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ
x

ಈಗ ಸಚಿನ್‌ ರವಿ ಬೇರೆ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ.

ಟೈಗರ್ ಶ್ರಾಫ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ

‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕ ಸಚಿನ್‌ ರವಿ, ಶಾಹಿದ್ ಕಪೂರ್ ಚಿತ್ರ ಸ್ಥಗಿತಗೊಂಡ ಬಳಿಕ ಟೈಗರ್ ಶ್ರಾಫ್ ನಟನೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.


Click the Play button to hear this message in audio format

ಕನ್ನಡದ ಜನಪ್ರಿಯ ನಿರ್ದೇಶಕ ಸಚಿನ್‌ ರವಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೂಲಕ ಗಮನ ಸೆಳೆದಿರುವ ಸಚಿನ್‌ ರವಿ, ಶಾಹಿದ್ ಕಪೂರ್ ಅಭಿನಯದ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಡಬೇಕಿತ್ತು. ಆದರೆ ಆ ಸಿನಿಮಾ ಸ್ಥಗಿತಗೊಂಡ ಬಳಿಕ ಇದೀಗ ಟೈಗರ್ ಶ್ರಾಫ್ ಅಭಿನಯದ ಹೊಸ ಆ್ಯಕ್ಷನ್ ಥ್ರಿಲ್ಲರ್ ಮೂಲಕ ತಮ್ಮ ಬಾಲಿವುಡ್ ಡೆಬ್ಯೂ ಪೂರ್ಣಗೊಳಿಸಿದ್ದಾರೆ.

2024ರಲ್ಲಿ ಘೋಷಣೆಯಾಗಿದ್ದ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಚಿತ್ರವನ್ನು ಸಚಿನ್‌ ರವಿ ನಿರ್ದೇಶಿಸಬೇಕಿತ್ತು. ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದ ಈ ಪೌರಾಣಿಕ ಆ್ಯಕ್ಷನ್ ಚಿತ್ರಕ್ಕೆ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರ ಪೂಜಾ ಎಂಟರ್‌ಟೈನ್‌ಮೆಂಟ್ ಹಾಗೂ ಅಮೆಜಾನ್ ಸ್ಟುಡಿಯೋಸ್ ಬೆಂಬಲವಿತ್ತು. ಸುಮಾರು ನಾಲ್ಕು ವರ್ಷಗಳಿಂದ ಯೋಜನೆಯ ಹಂತದಲ್ಲಿದ್ದ ಈ ಸಿನಿಮಾ ಹಲವು ಕಾರಣಗಳಿಂದಾಗಿ ಮುಂದುವರಿಯದೆ ಅಂತಿಮವಾಗಿ ಸ್ಥಗಿತಗೊಂಡಿತು. ಹೀಗಾಗಿ ಸಚಿನ್‌ ರವಿ ಅವರ ಬಾಲಿವುಡ್ ಪ್ರವೇಶವೂ ವಿಳಂಬವಾಯಿತು.

‘ಅಶ್ವತ್ಥಾಮ’ ಸುತ್ತ ಹಲವು ಸಿನಿಮಾಗಳ ಕತೆ

‘ಅಶ್ವತ್ಥಾಮ’ ಎಂಬ ಪೌರಾಣಿಕ ಪಾತ್ರದ ಕುರಿತ ಸಿನಿಮಾ ಘೋಷಣೆಯಾಗಿದ್ದು ಇದೇ ಮೊದಲೇನಲ್ಲ. ವಿಕ್ಕಿ ಕೌಶಲ್ ಅಭಿನಯದಲ್ಲಿ ಆದಿತ್ಯ ಧರ್ ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಚಿತ್ರವನ್ನು ಘೋಷಿಸಿದ್ದರು. ಆದರೆ ಚಿತ್ರದ ಬೃಹತ್ ಪ್ರಮಾಣದ ನಿರ್ಮಾಣ ಮತ್ತು ಬಜೆಟ್ ಸೇರಿದಂತೆ ಹಲವು ಕಾರಣಗಳಿಂದ ಆ ಯೋಜನೆಯೂ ಸ್ಥಗಿತಗೊಂಡಿತ್ತು.

ಸಚಿನ್‌ ರವಿಗೂ ‘ಅಶ್ವತ್ಥಾಮ’ ಕಥೆಯೊಂದಿಗೆ ಹಳೆಯ ನಂಟಿದೆ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಕನ್ನಡ ಚಿತ್ರವೊಂದನ್ನು ಅವರು ಈ ಹಿಂದೆ ಘೋಷಿಸಿದ್ದರು. ಮತ್ತೊಂದೆಡೆ, ಅನೂಪ್ ಭಂಡಾರಿ ಅವರು ಸುದೀಪ್ ಅಭಿನಯದಲ್ಲಿ ‘ಅಶ್ವತ್ಥಾಮ’ ಹೆಸರಿನ ಚಿತ್ರವನ್ನು ಘೋಷಿಸಿದ್ದರು. ಆದರೆ ಈ ಎರಡೂ ಯೋಜನೆಗಳು ಕೂಡ ಮುಂದೆ ಸಾಗಲಿಲ್ಲ.

ಟೈಗರ್ ಶ್ರಾಫ್ ಜೊತೆ ಹೊಸ ಆ್ಯಕ್ಷನ್ ಥ್ರಿಲ್ಲರ್

ಈಗ ಸಚಿನ್‌ ರವಿ ಬೇರೆ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಟೈಗರ್ ಶ್ರಾಫ್ ನಟನೆಯ ಹೆಸರಿಡದ ಆ್ಯಕ್ಷನ್ ಥ್ರಿಲ್ಲರ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ.

ಮುರಾದ್ ಖೇತಾನಿ ನಿರ್ಮಿಸಿರುವ ಈ ಚಿತ್ರದಲ್ಲಿ ಹೈ-ಕಾನ್ಸೆಪ್ಟ್ ಆ್ಯಕ್ಷನ್ ಜೊತೆಗೆ ಪ್ರೇಮಕಥೆಯ ಅಂಶಗಳೂ ಇರಲಿವೆ ಎನ್ನಲಾಗಿದೆ. ಆದರೆ ಚಿತ್ರದ ಪ್ರಮುಖ ಗಮನ ಸಾಂಪ್ರದಾಯಿಕ ರೊಮ್ಯಾಂಟಿಕ್ ಟ್ರ್ಯಾಕ್‌ಗಿಂತ ನಾಯಕನ ಪಾತ್ರ ಮತ್ತು ಆ್ಯಕ್ಷನ್ ಸನ್ನಿವೇಶಗಳ ಮೇಲಿರಲಿದೆ ಎಂದು ತಿಳಿದುಬಂದಿದೆ.

ಟೈಗರ್ ಶ್ರಾಫ್‌ರ ಆ್ಯಕ್ಷನ್ ಇಮೇಜ್‌ಗೂ ಹೊಸ ಟಚ್

ಟೈಗರ್ ಶ್ರಾಫ್ ಅವರ ಸಾಮಾನ್ಯ ಆ್ಯಕ್ಷನ್ ಹೀರೋ ಇಮೇಜ್‌ಗಿಂತ ಈ ಸಿನಿಮಾ ವಿಭಿನ್ನವಾಗಿರಲಿದೆ ಎನ್ನಲಾಗಿದೆ. ನಾಯಕನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಸಾಗಲಿದ್ದು, ಆ್ಯಕ್ಷನ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ವರದಿಯಾಗಿದೆ.

ಚಿತ್ರದ ಶೀರ್ಷಿಕೆ, ಉಳಿದ ತಾರಾಗಣ ಮತ್ತು ತಾಂತ್ರಿಕ ತಂಡದ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ. ‘ಅವನೇ ಶ್ರೀಮನ್ನಾರಾಯಣ’ ಮೂಲಕ ಕನ್ನಡದಲ್ಲಿ ತಮ್ಮದೇ ಶೈಲಿಯ ನಿರ್ದೇಶನಕ್ಕೆ ಹೆಸರು ಮಾಡಿರುವ ಸಚಿನ್‌ ರವಿ, ಇದೀಗ ಬಾಲಿವುಡ್‌ನಲ್ಲೂ ಹೊಸ ಪ್ರಯತ್ನದೊಂದಿಗೆ ಗಮನ ಸೆಳೆಯುವ ನಿರೀಕ್ಷೆಯಿದೆ.

Read More
Next Story