
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ‘ಮ್ಯಾಕ್ಸ್’ ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ‘
ಸುದೀಪ್ ಪುತ್ರಿ ಸಾನ್ವಿ ಈಗ ತಮಿಳಿನಲ್ಲೂ ಮೋಡಿ; ‘ಸುಲೋಚನಾ’ ಹಾಡಿಗೆ ಧ್ವನಿ
‘ಸಿಗ್ಮಾ’ ಜೇಸನ್ ಸಂಜಯ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.
ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮದೇ ಆದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ‘ಮಸ್ತ್ ಮಲೈಕಾ’ ಹಾಡಿನ ಮೂಲಕ ಗಮನ ಸೆಳೆದಿದ್ದ ಸಾನ್ವಿ ಇದೀಗ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ‘ಸಿಗ್ಮಾ’ ಸಿನಿಮಾದ ‘ಸುಲೋಚನಾ’ ಎಂಬ ರೊಮ್ಯಾಂಟಿಕ್ ಹಾಡಿಗೆ ಅವರು ಧ್ವನಿ ನೀಡಿದ್ದಾರೆ.
‘ಸುಲೋಚನಾ’ ಹಾಡು ಪ್ರೇಮಭರಿತ ಹಾಗೂ ಮನಮೋಹಕ ಮೆಲೋಡಿಯಾಗಿದ್ದು, ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ. ಸೂಪರ್ ಸುಬು ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಸಾನ್ವಿ ಸುದೀಪ್ ಅವರ ವಿಭಿನ್ನ ಹಾಗೂ ಸುಮಧುರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ತಮಿಳು ಪದಗಳ ಉಚ್ಚಾರಣೆಯಲ್ಲೂ ಸಾನ್ವಿ ಸಹಜವಾಗಿ ಹಾಡಿರುವುದಕ್ಕೆ ಸಂಗೀತ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
‘ಮಸ್ತ್ ಮಲೈಕಾ’ ಬಳಿಕ ಮತ್ತೊಂದು ಭಾಷೆಯಲ್ಲಿ ಸಾನ್ವಿ
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡಿನ ಮೂಲಕ ಸಾನ್ವಿ ಗಾಯನ ಕ್ಷೇತ್ರದಲ್ಲಿ ಗಮನ ಸೆಳೆದಿದ್ದರು. ಇದೀಗ ‘ಸಿಗ್ಮಾ’ ಚಿತ್ರದ ಮೂಲಕ ತಮಿಳು ಭಾಷೆಯ ಹಾಡಿಗೂ ಧ್ವನಿ ನೀಡಿದ್ದು, ಸಾನ್ವಿ ಅವರ ಸಂಗೀತ ಪಯಣಕ್ಕೆ ಮತ್ತೊಂದು ಹೊಸ ಹೆಜ್ಜೆಯಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ‘ಸುಲೋಚನಾ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ
‘ಸಿಗ್ಮಾ’ ಸಿನಿಮಾ ನಟ ಹಾಗೂ ಟಿವಿಕೆ ನಾಯಕ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಸಂದೀಪ್ ಕಿಶನ್ ಹಾಗೂ ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆ್ಯಕ್ಷನ್, ಸಾಹಸ ಮತ್ತು ಹೀಸ್ಟ್ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

