
ಕಾಂತಾರದ ರಿಷಬ್‌ಗೆ ಅಂತರರಾಷ್ಟ್ರೀಯ ಮಟ್ಟದ ಮತ್ತೊಂದು ಗೌರವ
ಮೆಲ್ಬೋರ್ನ್ ಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿಗೆ ಪ್ರತಿಷ್ಠಿತ ಗೌರವ
ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಗೆ 2026ರ ಮೆಲ್ಬೋರ್ನ್ ಭಾರತೀಯ ಚಿತ್ರೋತ್ಸವದಲ್ಲಿ ಪ್ರತಿಷ್ಠಿತ 'ಲೀಡರ್‌ಶಿಪ್ ಇನ್ ಸಿನೆಮಾ' ಪ್ರಶಸ್ತಿ ಘೋಷಣೆಯಾಗಿದ್ದು, ಭಾರತೀಯ ಕಥನಕ್ಕೆ ಜಾಗತಿಕ ಮನ್ನಣೆ ದೊರೆತಿದೆ.
'ಕಾಂತಾರ' ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 2026ರ ಮೆಲ್ಬೋರ್ನ್ ಭಾರತೀಯ ಚಿತ್ರೋತ್ಸವ ದಲ್ಲಿ ಪ್ರತಿಷ್ಠಿತ 'ಲೀಡರ್‌ಶಿಪ್ ಇನ್ ಸಿನೆಮಾ' ಪ್ರಶಸ್ತಿ ಪ್ರದಾನವಾಗಲಿದೆ. ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಅವರ ವಿಶಿಷ್ಟ ಸಿನೆಮಾ ದೃಷ್ಟಿಕೋನ ಹಾಗೂ ನಿರ್ದೇಶನ ಮತ್ತು ನಟನೆಯಲ್ಲಿನ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.
ವಿಶೇಷವಾಗಿ 'ಕಾಂತಾರ' ಸರಣಿಯ ಮೂಲಕ ಕರಾವಳಿ ಕರ್ನಾಟಕದ ಸಂಸ್ಕೃತಿ, ಜನಪದ, ಆಧ್ಯಾತ್ಮಿಕ ಪರಂಪರೆ ಹಾಗೂ ಪ್ರಕೃತಿಯೊಂದಿಗಿನ ನಂಟನ್ನು ಸಾರ್ವತ್ರಿಕ ಮಾನವೀಯ ಭಾವನೆಗಳೊಂದಿಗೆ ಜೋಡಿಸಿ ಪ್ರೇಕ್ಷಕರ ಮನ ಗೆದ್ದ ರಿಷಬ್ ಶೆಟ್ಟಿ, ಸ್ಥಳೀಯ ಕಥೆಗಳಿಗೂ ಜಾಗತಿಕ ಮನ್ನಣೆ ಸಿಗಬಹುದು ಎಂಬುದನ್ನು ತಮ್ಮ ಸಿನಿಮಾಗಳ ಮೂಲಕ ಸಾಬೀತುಪಡಿಸಿದ್ದಾರೆ.
ಭಾರತೀಯ ಸಂಸ್ಕೃತಿಯ ಬೇರುಗಳಿಗೆ ಬದ್ಧವಾಗಿಯೇ ಆಧುನಿಕ ಕಥನ ಶೈಲಿಯನ್ನು ರೂಪಿಸಿ, ಭಾರತೀಯ ಸಿನಿಮಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಸುವಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಚಿತ್ರೋತ್ಸವದ ಆಯೋಜಕರು ತಿಳಿಸಿದ್ದಾರೆ.
ಮೆಲ್ಬೋರ್ನ್ ಭಾರತೀಯ ಚಿತ್ರೋತ್ಸವದ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾದ 'ಲೀಡರ್‌ಶಿಪ್ ಇನ್ ಸಿನೆಮಾ' ಪ್ರಶಸ್ತಿಯನ್ನು ಸ್ವೀಕರಿಸಲು ರಿಷಬ್ ಶೆಟ್ಟಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿತ್ರರಂಗ ಮತ್ತು ಸಂಸ್ಕೃತಿಯ ಮೇಲೆ ದೀರ್ಘಕಾಲಿಕ ಪ್ರಭಾವ ಬೀರಿದ ಸೃಜನಶೀಲರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
2026ರ ಮೆಲ್ಬೋರ್ನ್ ಭಾರತೀಯ ಚಿತ್ರೋತ್ಸವದಲ್ಲಿ ಭಾರತೀಯ ಹಾಗೂ ದಕ್ಷಿಣ ಏಷ್ಯಾದ ಚಿತ್ರರಂಗದ ಪ್ರಮುಖ ಕಲಾವಿದರು, ನಿರ್ದೇಶಕರು ಮತ್ತು ತಾಂತ್ರಿಕರು ಭಾಗವಹಿಸಲಿದ್ದು, ಚಲನಚಿತ್ರ ಪ್ರದರ್ಶನಗಳು, ಸಂವಾದಗಳು, ಉದ್ಯಮ ಸಂಬಂಧಿತ ಕಾರ್ಯಕ್ರಮಗಳು ಹಾಗೂ ವಾರ್ಷಿಕ IFFM ಪ್ರಶಸ್ತಿ ಸಮಾರಂಭಗಳು ನಡೆಯಲಿವೆ.
ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಿಷಬ್ ಶೆಟ್ಟಿ ಪ್ರಸ್ತುತ ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್', ಸಂದೀಪ್ ಸಿಂಗ್ ನಿರ್ಮಾಣದ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ 'ಕಾಂತಾರ 3' ಚಿತ್ರದ ಕಥೆಯ ಮೇಲೂ ಕೆಲಸ ಮಾಡುತ್ತಿದ್ದು, ತಮ್ಮ ನಿರ್ದೇಶನಕ್ಕೆ ಮರಳಲಿರುವ ಹೊಸ ಕನ್ನಡ ಚಿತ್ರದ ಸಿದ್ಧತೆಯನ್ನೂ ಗುಪ್ತವಾಗಿ ನಡೆಸುತ್ತಿದ್ದಾರೆ.

