
ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೈಲರ್ ವೀಕ್ಷಿಸಿದ ನಟ ರಿಷಬ್ ಶೆಟ್ಟಿ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Rishab Shetty| ರಾಮ್ ಚರಣ್ ನಟನೆಯ 'ಪೆದ್ದಿ' ಟ್ರೈಲರ್ ಕೊಂಡಾಡಿದ ರಿಷಬ್ ಶೆಟ್ಟಿ
ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೈಲರ್ ವೀಕ್ಷಿಸಿದ ನಟ ರಿಷಬ್ ಶೆಟ್ಟಿ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಹಾಗೂ ಜಾನ್ವಿ ಕಪೂರ್ ನಟನೆಯ ಈ ಸಿನಿಮಾ ಜೂನ್ 4 ರಂದು ತೆರೆಗೆ ಬರಲಿದೆ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪೆದ್ದಿ' ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ಭರ್ಜರಿ ಟ್ರೈಲರ್ ಅನ್ನು ವೀಕ್ಷಿಸಿರುವ ಸ್ಯಾಂಡಲ್ವುಡ್ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರದ ಟ್ರೈಲರ್ ಹಂಚಿಕೊಂಡಿರುವ ಅವರು, ಇದೊಂದು ಅದ್ಭುತವಾದ ದೃಶ್ಯಕಾವ್ಯ ಎಂದು ಬಣ್ಣಿಸಿದ್ದಾರೆ.
ಟ್ರೈಲರ್ನಲ್ಲಿನ ರಾಮ್ ಚರಣ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಿಷಬ್ ಶೆಟ್ಟಿ, ಪ್ರತಿ ಫ್ರೇಮ್ನಲ್ಲೂ ರಾಮ್ ಚರಣ್ ಅತ್ಯಂತ ಆಕರ್ಷಕವಾಗಿ ಮತ್ತು ಬೆಂಕಿಯಂತೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರ ಬಗ್ಗೆಯೂ ಬರೆದುಕೊಂಡಿರುವ ಅವರು, ಶಿವಣ್ಣ ಅವರ ಅದ್ಭುತವಾದ ಸ್ಕ್ರೀನ್ ಪ್ರೆಸೆನ್ಸ್ ಚಿತ್ರಕ್ಕೆ ಮತ್ತಷ್ಟು ಗಾಂಭೀರ್ಯ ಹಾಗೂ ಭವ್ಯವಾದ ಮೆರುಗನ್ನು ನೀಡಿದೆ ಎಂದು ಕೊಂಡಾಡಿದ್ದಾರೆ. ಅಲ್ಲದೆ ನಾಯಕಿ ಜಾನ್ವಿ ಕಪೂರ್ ಅವರ ನಟನೆ ಸಿನಿಮಾಗೆ ಕಳೆ ತಂದಿದೆ ಎಂದಿದ್ದಾರೆ. ಚಿತ್ರವನ್ನು ಅದ್ಭುತವಾಗಿ ತೆರೆಗೆ ತಂದಿರುವ ನಿರ್ದೇಶಕ ಬುಚ್ಚಿ ಬಾಬು ಸನಾ ಹಾಗೂ ಇಡೀ ಚಿತ್ರತಂಡಕ್ಕೆ ರಿಷಬ್ ಶೆಟ್ಟಿ ಶುಭ ಹಾರೈಸಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪೆದ್ದಿ' ಸಿನಿಮಾವು ಒಂದು ಕ್ರೀಡಾ ಆಧಾರಿತ ಗ್ರಾಮೀಣ ಹಿನ್ನೆಲೆಯ ಆಕ್ಷನ್ ಡ್ರಾಮಾ ಚಿತ್ರವಾಗಿದೆ. ಟ್ರೈಲರ್ನಲ್ಲಿ ರಾಮ್ ಚರಣ್ ಕುಸ್ತಿ, ಕ್ರಿಕೆಟ್ ಮತ್ತು ಓಟ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಮಲ್ಟಿ-ಟ್ಯಾಲೆಂಟೆಡ್ ಅಥ್ಲೀಟ್ ಆಗಿ ಗಮನ ಸೆಳೆದಿದ್ದಾರೆ. ವೆಂಕಟ ಸತೀಶ್ ಕೀಲಾರು ಅವರು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಸಹಭಾಗಿತ್ವ ಹೊಂದಿವೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿರುವ ಈ ಬಹುಭಾಷಾ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

