ಗಿರೀಶ್ ಕಾಸರವಳ್ಳಿ ‘ಘಟಶ್ರಾದ್ಧ’ಕ್ಕೆ ಹೊಸ ರೂಪ; ಸೆ.14ಕ್ಕೆ ರೀ ರಿಲೀಸ್‌
x

ಕಾಸರವಳ್ಳಿ ಚೊಚ್ಚಲ ಚಿತ್ರ ‘ಘಟಶ್ರಾದ್ಧ’ಗೆ ಮರುಜೀವ

ಗಿರೀಶ್ ಕಾಸರವಳ್ಳಿ ‘ಘಟಶ್ರಾದ್ಧ’ಕ್ಕೆ ಹೊಸ ರೂಪ; ಸೆ.14ಕ್ಕೆ ರೀ ರಿಲೀಸ್‌

ಯು.ಆರ್. ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿರುವ ಈ ಸಿನಿಮಾ, ಅಗ್ರಹಾರದಲ್ಲಿ ಬದುಕುವ ಬಾಲಕನೊಬ್ಬ ಮತ್ತು ಗರ್ಭಿಣಿ ವಿಧವೆಯ ನಡುವಿನ ಸೂಕ್ಷ್ಮ ಬಾಂಧವ್ಯದ ಕಥೆಯನ್ನು ಹೇಳುತ್ತದೆ. ಜಾತಿ ವ್ಯವಸ್ಥೆ, ಪಿತೃಪ್ರಧಾನ ಸಮಾಜ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ವಿಚಾರಗಳನ್ನು ಚಿತ್ರ ಪರಿಣಾಮಕಾರಿಯಾಗಿ ತೆರೆದಿಡುತ್ತದೆ.

Click the Play button to hear this message in audio format

ಕನ್ನಡ ಚಿತ್ರರಂಗದ ಸರ್ವಶ್ರೇಷ್ಠ ಹಾಗೂ ಮೈಲಿಗಲ್ಲು ಚಲನಚಿತ್ರಗಳಲ್ಲಿ ಒಂದಾದ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚೊಚ್ಚಲ ಸಿನಿಮಾ ‘ಘಟಶ್ರಾದ್ಧ’ (1977) ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ರಿಸ್ಟೋರ್‌ ಮಾಡಲಾಗಿರುವ ಈ ಐತಿಹಾಸಿಕ ಚಿತ್ರವು ಬರುವ ಸೆಪ್ಟೆಂಬರ್ 14ರಂದು ಇಂಗ್ಲೆಂಡ್‌ ಮೂಲದ ಪ್ರಸಿದ್ಧ 'ಸೆಕೆಂಡ್ ರನ್' ಸಂಸ್ಥೆಯಿಂದ ವಿಶೇಷ ಬ್ಲೂ-ರೇ ಆವೃತ್ತಿಯಾಗಿ ಜಾಗತಿಕವಾಗಿ ರಿಲೀಸ್‌ ಆಗಲಿದೆ.

ಯು.ಆರ್. ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿರುವ ಈ ಸಿನಿಮಾ, ಅಗ್ರಹಾರದಲ್ಲಿ ಬದುಕುವ ಬಾಲಕನೊಬ್ಬ ಮತ್ತು ಗರ್ಭಿಣಿ ವಿಧವೆಯ ನಡುವಿನ ಸೂಕ್ಷ್ಮ ಬಾಂಧವ್ಯದ ಕಥೆಯನ್ನು ಹೇಳುತ್ತದೆ. ಜಾತಿ ವ್ಯವಸ್ಥೆ, ಪಿತೃಪ್ರಧಾನ ಸಮಾಜ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ವಿಚಾರಗಳನ್ನು ಚಿತ್ರ ಪರಿಣಾಮಕಾರಿಯಾಗಿ ತೆರೆದಿಡುತ್ತದೆ.

ಫಿಲ್ಮ್ ಹೆರಿಟೇಜ್ ಫೌಂಡೇಶನ್ (FHF) ಮತ್ತು ದಿ ಫಿಲ್ಮ್ ಫೌಂಡೇಶನ್‌ನ ವರ್ಲ್ಡ್ ಸಿನಿಮಾ ಪ್ರಾಜೆಕ್ಟ್ ಸಹಯೋಗದಲ್ಲಿ 2024ರಲ್ಲಿ ಎಲ್'ಇಮೇಜ್ ರಿತ್ರೊವಾಟಾ ಪ್ರಯೋಗಾಲಯದಲ್ಲಿ ಚಿತ್ರದ ಮರುಸ್ಥಾಪನೆ ಮಾಡಲಾಗಿದೆ. ಹಾಬ್ಸನ್/ಲ್ಯೂಕಾಸ್ ಫ್ಯಾಮಿಲಿ ಫೌಂಡೇಶನ್ ಈ ರಿಸ್ಟೋರ್‌ಗೆ ಆರ್ಥಿಕ ನೆರವು ನೀಡಿದೆ.

ಸೆಕೆಂಡ್ ರನ್ ಬಿಡುಗಡೆ ಮಾಡುತ್ತಿರುವ ಫಿಲ್ಮ್ ಹೆರಿಟೇಜ್ ಫೌಂಡೇಶನ್‌ ಮರುಸ್ಥಾಪಿತ ಚಿತ್ರಗಳ ಸರಣಿಯಲ್ಲಿ ‘ಘಟಶ್ರಾದ್ಧ’ ನಾಲ್ಕನೇ ಚಿತ್ರವಾಗಿದೆ. ಈ ಹಿಂದೆ ಜಿ. ಅರವಿಂದನ್ ಅವರ ‘ಥಂಪ್’, ಅರಿಬಮ್ ಶ್ಯಾಮ್ ಶರ್ಮಾ ಅವರ ‘ಇಶಾನೌ’ ಮತ್ತು ಶ್ಯಾಮ್ ಬೆನಗಲ್ ಅವರ ‘ಮಂಥನ್’ ಚಿತ್ರಗಳ ಮರುಸ್ಥಾಪಿತ ಆವೃತ್ತಿಗಳನ್ನು ಸಂಸ್ಥೆ ಬಿಡುಗಡೆ ಮಾಡಿತ್ತು.

ಮರುಸ್ಥಾಪಿಸಿದ ಚಿತ್ರಗಳು ಕೇವಲ ಸಂರಕ್ಷಿಸಲ್ಪಡುವುದಷ್ಟೇ ಅಲ್ಲದೆ, ಮುಂದಿನ ಪೀಳಿಗೆಯ ಸಿನಿಪ್ರಿಯರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಬ್ಲೂ-ರೇ ಬಿಡುಗಡೆಗಳು ನೆರವಾಗಲಿವೆ ಎಂದು ಫಿಲ್ಮ್ ಹೆರಿಟೇಜ್ ಫೌಂಡೇಶನ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ. ಶಿವೇಂದ್ರ ಸಿಂಗ್ ದುಂಗರ್‌ಪುರ್ ನೇತೃತ್ವದ ಫಿಲ್ಮ್ ಹೆರಿಟೇಜ್ ಫೌಂಡೇಶನ್, ಭಾರತದ ಐತಿಹಾಸಿಕ ಮಹತ್ವದ ಚಲನಚಿತ್ರಗಳನ್ನು ಸಂರಕ್ಷಿಸಿ, ಮರುಸ್ಥಾಪಿಸಿ ಮತ್ತೆ ಪ್ರೇಕ್ಷಕರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ.

Read More
Next Story