ಪ್ರೀತಿಯ ಪತಿಯನ್ನು ಹಾಡಿ ಹೊಗಳಿದ ನಟಿ ರಶ್ಮಿಕಾ ಮಂದಣ್ಣ
x

ವಿಜಯ್ ದೇವರಕೊಂಡ ಜೊತೆಗಿನ ಬಾಂಧವ್ಯ ಹಾಗೂ ವೃತ್ತಿಜೀವನದ ಬಗ್ಗೆ ರಶ್ಮಿಕಾ 
 ಮನಬಿಚ್ಚಿ ಮಾತನಾಡಿದ್ದಾರೆ.

ಪ್ರೀತಿಯ ಪತಿಯನ್ನು ಹಾಡಿ ಹೊಗಳಿದ ನಟಿ ರಶ್ಮಿಕಾ ಮಂದಣ್ಣ

ಗಾಯದಿಂದ ಚೇತರಿಸಿಕೊಳ್ಳಲು ತೆಗೆದುಕೊಂಡಿದ್ದ ಒಂದು ತಿಂಗಳ ವಿರಾಮ ರಶ್ಮಿಕಾಗೆ ಜೀವನದ ಹೊಸ ಪಾಠ ಕಲಿಸಿದೆಯಂತೆ. ಇದೇ ವೇಳೆ ವಿಜಯ್ ದೇವರಕೊಂಡ ಜೊತೆಗಿನ ತಮ್ಮ ಬಾಂಧವ್ಯ ಮತ್ತು ‘ರಣಬಾಲಿ’ ಕುರಿತೂ ನಟಿ ಮಾತನಾಡಿದ್ದಾರೆ.


Click the Play button to hear this message in audio format

ಗಾಯದಿಂದ ಚೇತರಿಸಿಕೊಳ್ಳುವ ನಿಟ್ಟಿನಲಕ್ಲಿಚ ಸಿಕ್ಕ ವಿರಾಮದ ವೇಳೆ ಜೀವನದ ಹಲವು ಸಂಗತಿಗಳನ್ನು ಹೊಸದಾಗಿ ಅರಿತುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಪತಿ ವಿಜಯ್ ದೇವರಕೊಂಡ ಜೊತೆಗಿನ ಬಾಂಧವ್ಯ, ಹೊಸ ಕುಟುಂಬದ ಒಡನಾಟ ಹಾಗೂ ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕೆಲಸ ಮಾಡುವ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆರೆಮೇಲೆ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಇದೀಗ ಈ ಜೋಡಿ ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಮದುವೆಯ ಬಳಿಕ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.

ವಿಜಯ್ ಜೊತೆ ಕೆಲಸ ಮಾಡುವ ಅನುಭವದ ಬಗ್ಗೆ ಮಾತನಾಡಿರುವ ರಶ್ಮಿಕಾ, ಇಬ್ಬರೂ ಮನೆಯಲ್ಲಿದ್ದಾಗ ಕೆಲಸದ ವಿಚಾರಗಳನ್ನು ಚರ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಶೂಟಿಂಗ್ ಸೆಟ್‌ಗೆ ಬಂದಾಗ ಇಬ್ಬರೂ ಪರಸ್ಪರ ತಮ್ಮ ನಟನೆಯನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರೇರೇಪಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

‘ನಾನು ಈ ದೃಶ್ಯವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದೇ? ಬೇರೆ ರೀತಿಯಲ್ಲಿ ಹೇಗೆ ಮಾಡಬಹುದು?’ ಎಂಬಂತಹ ಪ್ರಶ್ನೆಗಳನ್ನು ಪರಸ್ಪರ ಕೇಳಿಕೊಳ್ಳುತ್ತೇವೆ. ತಮ್ಮನ್ನು ಇನ್ನಷ್ಟು ಉತ್ತಮ ವ್ಯಕ್ತಿಯಾಗಲು ಪ್ರೇರೇಪಿಸುವ ವ್ಯಕ್ತಿ ಜೊತೆಯಲ್ಲಿರುವುದು ಅದ್ಭುತ ಎಂದು ರಶ್ಮಿಕಾ ಹೇಳಿದ್ದಾರೆ. ತಾನೂ ವಿಜಯ್‌ಗೆ ಅದೇ ರೀತಿಯ ವ್ಯಕ್ತಿಯಾಗಲು ಬಯಸುವುದಾಗಿ ತಿಳಿಸಿದ್ದಾರೆ.

ವಿಜಯ್ ಕುಟುಂಬದ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಮದುವೆಯ ಬಳಿಕ ವಿಜಯ್ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆದಿರುವ ರಶ್ಮಿಕಾ, ಅವರ ಕುಟುಂಬದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಜಯ್ ಅವರ ತಾಯಿ, ತಂದೆ ಮತ್ತು ಸಹೋದರ ಆನಂದ್ ತಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ವಿಜಯ್ ಅವರ ತಾಯಿಯನ್ನು ‘ಪಾಪಾ’ ಎಂದು ಕರೆಯುವುದಾಗಿ ಹೇಳಿರುವ ರಶ್ಮಿಕಾ, ಅವರು ತಮ್ಮ ಕುಟುಂಬದ ಸಂತೋಷದ ಮೂಲ ಎಂದು ಬಣ್ಣಿಸಿದ್ದಾರೆ. ವಿಜಯ್ ಮತ್ತು ಆನಂದ್ ಅವರಲ್ಲಿರುವ ಸೌಮ್ಯ ಸ್ವಭಾವದ ಹಿಂದೆಯೂ ಅವರ ತಾಯಿಯ ಪ್ರಭಾವವಿದೆ ಎಂದು ಹೇಳಿದ್ದಾರೆ.

ವಿಜಯ್‌ಗೆ ತನ್ನ ಬಾಲ್ಯದ ಜಗತ್ತನ್ನು ತೋರಿಸಿದ ರಶ್ಮಿಕಾ

ವಿವಾಹದ ಬಳಿಕ ರಶ್ಮಿಕಾ ವಿಜಯ್ ಜೊತೆ ಕೊಡಗಿಗೂ ತೆರಳಿದ್ದರು. ಮದುವೆಗೆ ಕೆಲವು ಸಂಬಂಧಿಕರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಲು ಕೊಡಗಿಗೆ ತೆರಳಿದ್ದಾಗಿ ಅವರು ಹೇಳಿದ್ದಾರೆ.

ತಾನು ಬೆಳೆದ ಸ್ಥಳ, ಓದಿದ ಶಾಲೆ, ಬಾಲ್ಯದ ಸ್ನೇಹಿತರು ಹಾಗೂ ತಮಗೆ ವಿಶೇಷವಾದ ಇಗ್ಗುತ್ತಪ್ಪ ದೇವಸ್ಥಾನವನ್ನು ವಿಜಯ್‌ಗೆ ತೋರಿಸಿದ್ದಾಗಿ ರಶ್ಮಿಕಾ ಹೇಳಿದ್ದಾರೆ. ಎರಡೂ ಕುಟುಂಬಗಳು ಒಟ್ಟಾಗಿ ಸಮಯ ಕಳೆದಿದ್ದು, ಈ ಪ್ರವಾಸ ತಮ್ಮ ಪಾಲಿಗೆ ವಿಶೇಷವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಬೆನ್ನುನೋವು ರಶ್ಮಿಕಾಗೆ ಕಲಿಸಿದ ದೊಡ್ಡ ಪಾಠ

ಸದಾ ಶೂಟಿಂಗ್, ಪ್ರಯಾಣ ಮತ್ತು ಕೆಲಸದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ, ಬೆನ್ನುನೋವಿನಿಂದಾಗಿ ಸುಮಾರು ಒಂದು ತಿಂಗಳು ಕೆಲಸದಿಂದ ದೂರ ಉಳಿಯಬೇಕಾಯಿತು. ವೃತ್ತಿಜೀವನ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೀರ್ಘ ಸಮಯ ಮನೆಯಲ್ಲೇ ಉಳಿದಿದ್ದಾಗಿ ಅವರು ಹೇಳಿದ್ದಾರೆ.

ಈ ಅನಿರೀಕ್ಷಿತ ವಿರಾಮದಿಂದ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು. ಜೊತೆಗೆ, ಜೀವನದಲ್ಲಿ ನಾವು ಸಹಜವೆಂದುಕೊಳ್ಳುವ ಸಣ್ಣ ಸಣ್ಣ ಸಂಗತಿಗಳ ಮಹತ್ವವನ್ನು ಅರಿತುಕೊಂಡೆ ಎಂದು ರಶ್ಮಿಕಾ ಹೇಳಿದ್ದಾರೆ.

‘ಒಂದು ಕ್ಷಣ ಜೀವನವನ್ನೇ ಬದಲಿಸಬಹುದು’

ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ತಾನು ಎಲ್ಲವನ್ನೂ ನಿಭಾಯಿಸಬಲ್ಲೆ ಎಂದುಕೊಂಡಿದ್ದೆ. ಆದರೆ ಗಾಯದ ಬಳಿಕ ತನ್ನ ಆಲೋಚನೆ ಬದಲಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.

ನಡೆಯುವುದು, ಕೆಲಸ ಮಾಡುವುದು, ಜನರೊಂದಿಗೆ ಸಮಯ ಕಳೆಯುವುದು ಸೇರಿದಂತೆ ಸಾಮಾನ್ಯವೆನಿಸುವ ಸಂಗತಿಗಳನ್ನೂ ನಾವು ಲಘುವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅವುಗಳ ನಿಜವಾದ ಮೌಲ್ಯವನ್ನು ಈ ವಿರಾಮ ನನಗೆ ತಿಳಿಸಿಕೊಟ್ಟಿದೆ ಎಂದಿದ್ದಾರೆ.

ನೇಪಾಳ ಪ್ರವಾಹವೂ ರಶ್ಮಿಕಾ ಮನಸ್ಸಿಗೆ ತಟ್ಟಿದೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಂತಹ ಘಟನೆಗಳು ಜೀವನ ಎಷ್ಟು ಅನಿರೀಕ್ಷಿತ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತವೆ ಎಂದು ರಶ್ಮಿಕಾ ಹೇಳಿದ್ದಾರೆ. ಜೀವನದಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಹೀಗಾಗಿ ನೆಮ್ಮದಿ ಮತ್ತು ಸಂತೋಷ ನೀಡುವ ಸಂಗತಿಗಳಿಗೆ ಸಮಯ ಕೊಡಬೇಕು. ನಮ್ಮ ಸುತ್ತಮುತ್ತಲಿರುವವರನ್ನು ಪ್ರೀತಿಸಬೇಕು ಮತ್ತು ಮುಖ್ಯವಾಗಿ ಪ್ರಸ್ತುತ ಕ್ಷಣದಲ್ಲಿ ಬದುಕಬೇಕು ಎಂಬುದನ್ನು ಈ ವಿರಾಮ ಕಲಿಸಿಕೊಟ್ಟಿದೆ ಎಂದು ರಶ್ಮಿಕಾ ಹೇಳಿದ್ದಾರೆ.

ಮತ್ತೆ ‘ರಣಬಾಲಿ’ ಸೆಟ್‌ಗೆ ರಶ್ಮಿಕಾ–ವಿಜಯ್

ಮದುವೆಯ ಬಳಿಕ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ರಶ್ಮಿಕಾ ಇದೀಗ ಮತ್ತೆ ಕೆಲಸದತ್ತ ಗಮನ ಹರಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ‘ರಣಬಾಲಿ’ ಅವರ ಮುಂದಿನ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ.

Read More
Next Story