
ಗಾಯದಿಂದ ವಿಶ್ರಾಂತಿಯಲ್ಲಿ ರಶ್ಮಿಕಾ
'ದೇಹ ಯಂತ್ರವಲ್ಲ'- ಗಾಯದ ಬಳಿಕ ಭಾವನಾತ್ಮಕ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ
ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ, ವಿಶ್ರಾಂತಿ, ಕುಟುಂಬದೊಂದಿಗೆ ಸಮಯ, ಆರೋಗ್ಯಕರ ಜೀವನಶೈಲಿ ಹಾಗೂ ಭವಿಷ್ಯದ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಆರೋಗ್ಯದ ಕುರಿತು ಅಭಿಮಾನಿಗಳಿಗೆ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ದಿನಚರಿ, ಚೇತರಿಕೆಯ ಪ್ರಕ್ರಿಯೆ ಹಾಗೂ ಕುಟುಂಬದೊಂದಿಗೆ ಕಳೆಯುತ್ತಿರುವ ಸಮಯದ ಬಗ್ಗೆ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ.
ಗಾಯದ ನಂತರ ತಮ್ಮ ದಿನಗಳು ವಿಶ್ರಾಂತಿ, ಉತ್ತಮ ನಿದ್ರೆ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದರಲ್ಲೇ ಕಳೆಯುತ್ತಿವೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಪುಸ್ತಕ ಓದುವುದು, ಪಜಲ್‌ಗಳನ್ನು ಬಿಡಿಸುವುದು, ವೆಬ್ ಶೋಗಳನ್ನು ವೀಕ್ಷಿಸುವುದು, ಕೂದಲು ಮತ್ತು ತ್ವಚೆಯ ಆರೈಕೆ ಮಾಡಿಕೊಳ್ಳುವುದು, ಕೆಲ ಕೆಲಸದ ಸಭೆಗಳಲ್ಲಿ ಭಾಗವಹಿಸುವುದು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವುದು ತಮ್ಮ ದಿನಚರಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಮದುವೆಯ ನೆನಪುಗಳನ್ನು ಮೆಲುಕು ಹಾಕಿದ ನಟಿ
ಚೇತರಿಕೆಯ ಸಮಯದಲ್ಲಿ ಈವರೆಗೆ ಸರಿಯಾಗಿ ನೋಡಲು ಸಾಧ್ಯವಾಗದ ತಮ್ಮ ಮದುವೆಯ ಫೋಟೋಗಳು ಮತ್ತು ವಿಡಿಯೊಗಳನ್ನು ಈಗ ವೀಕ್ಷಿಸುತ್ತಿದ್ದೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಬ್ಯುಸಿ ವೇಳಾಪಟ್ಟಿಯ ಕಾರಣ ಇದುವರೆಗೆ ಆ ನೆನಪುಗಳನ್ನು ಆಸ್ವಾದಿಸಲು ಸಮಯ ಸಿಕ್ಕಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಅಲಾರಂ ಇಲ್ಲದ ಜೀವನ, ನಿಯಂತ್ರಿತ ಆಹಾರ ಪದ್ಧತಿ
ಇದೀಗ ಅಲಾರಂ ಬಳಸದೇ ದೇಹಕ್ಕೆ ಬೇಕಾದ ಸಮಯದಲ್ಲಿ ಎದ್ದೇಳುತ್ತಿದ್ದು, ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸುತ್ತಿದ್ದೇನೆ. ಅತಿಯಾಗಿ ತಿನ್ನದಂತೆ ಎಚ್ಚರಿಕೆ ವಹಿಸುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ವಿವರಿಸಿದ್ದಾರೆ. ರಾತ್ರಿ ಬೇಗ ಮಲಗುವುದು ಹಾಗೂ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ನೀಡುವುದಕ್ಕೂ ಆದ್ಯತೆ ನೀಡುತ್ತಿದ್ದೇನೆ ಎಂದಿದ್ದಾರೆ.
'ದೇಹವನ್ನು ಯಂತ್ರದಂತೆ ನೋಡಿಕೊಳ್ಳಬಾರದು'
ಕೆಲ ದಿನಗಳ ಹಿಂದಷ್ಟೇ ತಮ್ಮ ಗಾಯದ ಬಗ್ಗೆ ಮಾತನಾಡಿದ್ದ ರಶ್ಮಿಕಾ, ಇದು ಸತತವಾಗಿ ಸಂಭವಿಸಿದ ಮೂರನೇ ಗಾಯ ಎಂದು ತಿಳಿಸಿದ್ದರು. ದೇಹವನ್ನು ಯಂತ್ರದಂತೆ ಅಲ್ಲ, ಮನುಷ್ಯನ ದೇಹದಂತೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬ ಪಾಠ ಈ ಘಟನೆಗಳಿಂದ ಕಲಿತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಗಾಯದ ಅವಧಿಯಲ್ಲಿ ಕುಟುಂಬದವರು ಹಾಗೂ ತಮ್ಮ ಶ್ವಾನಗಳೊಂದಿಗೆ ಸಮಯ ಕಳೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ
ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಹಲವು ಮಹತ್ವದ ಸಿನಿಮಾಗಳಿವೆ. 'ಮೈಸಾ' , 'ರಣಬಾಳಿ' , 'ಪುಷ್ಪ 3' , 'ಅನಿಮಲ್ ಪಾರ್ಕ್'ಹಾಗೂ 'ರಕ್ಕಾ' ಸೇರಿದಂತೆ ಹಲವು ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

