
ಕತಾರ್‌ನಲ್ಲಿ 'ಸಂಭ್ರಮ 2026': ಸಂಗೀತ ಸುಧೆಯಲ್ಲಿ ಮಿಂದೆದ್ದ ಅನಿವಾಸಿ ಕನ್ನಡಿಗರು
"ಕನ್ನಡದ ಧ್ವನಿ... ಹೃದಯಗಳ ಸಂಭ್ರಮ" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಸಮಾರಂಭವು ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ವಿದೇಶ ನೆಲದಲ್ಲಿ ಅದ್ದೂರಿಯಾಗಿ ಅನಾವರಣಗೊಳಿಸಿತು.
ಮರುಭೂಮಿಯ ನಾಡು ಕತಾರ್‌ನಲ್ಲಿ ಕನ್ನಡದ ಕಂಪು ಪಸರಿಸಿತು. ಕತಾರ್‌ನ ಪ್ರತಿಷ್ಠಿತ ಭಾರತೀಯ ಪ್ರವಾಸಿ ಸಂಘಟನೆ 'ಕರ್ನಾಟಕ ಸಂಘ ಕತಾರ್' (ಕೆಎಸ್‍ಕ್ಯೂ) ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ 'ಸಂಭ್ರಮ 2026' ಕಾರ್ಯಕ್ರಮವು ಅನಿವಾಸಿ ಕನ್ನಡಿಗರ ಪಾಲಿಗೆ ಒಂದು ಅವಿಸ್ಮರಣೀಯ ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟಿತು. "ಕನ್ನಡದ ಧ್ವನಿ... ಹೃದಯಗಳ ಸಂಭ್ರಮ" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಸಮಾರಂಭವು ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ವಿದೇಶ ನೆಲದಲ್ಲಿ ಅದ್ದೂರಿಯಾಗಿ ಅನಾವರಣಗೊಳಿಸಿತು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಭಾವನಾ ನವೀನ್ ಅವರ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಅವರು ದೀಪ ಬೆಳಗುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಈ ಭವ್ಯ ವೇದಿಕೆಗೆ ಮುಖ್ಯ ಅತಿಥಿಗಳಾಗಿ ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ವಿಪುಲ್ ಅವರು ಆಗಮಿಸಿದ್ದು ಕಾರ್ಯಕ್ರಮದ ಗಂಭೀರತೆಯನ್ನು ಹೆಚ್ಚಿಸಿತು.
ಸಂಗೀತದ ಜಾದೂ: ರಾಜೇಶ್ ಕೃಷ್ಣನ್ ಅಬ್ಬರ
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದವರು ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್. ಇವರ ನೇತೃತ್ವದ ಸಂಗೀತ ವಾದ್ಯವೃಂದದ ನೇರ ಗಾಯನ ಪ್ರದರ್ಶನವು ಪ್ರೇಕ್ಷಕರನ್ನು ಅಕ್ಷರಶಃ ಸಂಗೀತದ ಲೋಕಕ್ಕೆ ಕರೆದೊಯ್ಯಿತು. ಇವರೊಂದಿಗೆ ಪುಷ್ಪಾ ಆರಾಧ್ಯ, ಸೀಮಾ ರಾಯ್ಕರ್ ಮತ್ತು ಸಂತೋಷ್ ದೇವಯ್ಯ ಅವರ ಕಂಠಸಿರಿಯಿಂದ ಹೊರಹೊಮ್ಮಿದ ಹಳೆಯ ಭಾವಗೀತೆಗಳು, ಯುಗಳ ಗೀತೆಗಳು ಹಾಗೂ ಇತ್ತೀಚಿನ ಸೂಪರ್ ಹಿಟ್ ಚಿತ್ರಗೀತೆಗಳು ಸಭಾಂಗಣದಲ್ಲಿ ವಿದ್ಯುತ್ ಸಂಚಲನ ಮೂಡಿಸಿದವು. ಖ್ಯಾತ ನಿರೂಪಕ ನಟರಾಜ್ ಶೆಟ್ಟಿಕೆರೆ ಅವರ ವಾಕ್ಚಾತುರ್ಯ ಮತ್ತು ನಿರೂಪಣಾ ಶೈಲಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಸಾಮರಸ್ಯದ ಸಂಕೇತ 'ಸಂಭ್ರಮ 2026'
ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಘದ ಯಶಸ್ಸಿನ ಹಿಂದಿರುವ ಪೋಷಕರು, ಪ್ರಾಯೋಜಕರು ಮತ್ತು ಸ್ವಯಂಸೇವಕರ ಪರಿಶ್ರಮವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಸಮಾರಂಭದಲ್ಲಿ ಕತಾರ್‌ನ ವಿವಿಧ ಪ್ರಮುಖ ಭಾರತೀಯ ಸಂಘಟನೆಗಳಾದ ಐಸಿಸಿ, ಐಸಿಬಿಎಫ್, ಐಬಿಪಿಸಿ ಮತ್ತು ಐಎಸ್‌ಸಿ ಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿ, ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸಿದರು.2026-2028ರ ಅವಧಿಯ ಕೆಎಸ್‍ಕ್ಯೂ ಆಡಳಿತ ಮಂಡಳಿಯು ಅತೀ ಕಡಿಮೆ ಸಮಯದಲ್ಲಿ ಇಂತಹ ಬೃಹತ್ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸಿರುವುದು ಅವರ ನಿಖರ ಯೋಜನೆ ಮತ್ತು ತಂಡದ ಶಕ್ತಿಗೆ ಸಾಕ್ಷಿಯಾಗಿದೆ. ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದಲ್ಲಿ ಉಪಾಧ್ಯಕ್ಷ ಅನಿಲ್ ಭಾಸಗಿ, ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸೇರಿದಂತೆ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ್ದಾರೆ.
'ಸಂಭ್ರಮ 2026' ಕತಾರ್ ನೆಲದಲ್ಲಿ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಲ್ಲದೆ, ಅನಿವಾಸಿ ಕನ್ನಡಿಗರನ್ನು ಒಂದೇ ಸೂರಿನಡಿ ತರುವ ಮೂಲಕ ಭಾಷಾ ಪ್ರೇಮವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಕತಾರ್‌ನಲ್ಲಿ ಕನ್ನಡ ಸಾಂಸ್ಕೃತಿಕ ಆಚರಣೆಗಳಿಗೆ ಈ ಕಾರ್ಯಕ್ರಮವು ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

