
ರಣವೀರ್ ಸಿಂಗ್ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪ್ರಸ್ತುತ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ.
7 ತಿಂಗಳ ಗರ್ಭಿಣಿ ದೀಪಿಕಾ ಪಡುಕೋಣೆ ‘ರಾಕಾ’ ಚಿತ್ರದ ಭರ್ಜರಿ ಆ್ಯಕ್ಷನ್ ಶೂಟಿಂಗ್‌ನಲ್ಲಿ ಬ್ಯುಸಿ
7 ತಿಂಗಳ ಗರ್ಭಿಣಿಯಾದರೂ ನಟಿ ದೀಪಿಕಾ ಪಡುಕೋಣೆ ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರಕ್ಕಾಗಿ ರಾತ್ರಿ ಪಾಳಿಯಲ್ಲಿ ಕಠಿಣ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿಕೊಡುತ್ತಿದ್ದು, ಇವರ ಸಿನಿಮಾ ಬದ್ಧತೆಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.
ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ತಮ್ಮ ವೃತ್ತಿಪರತೆ ಮತ್ತು ಸಿನಿಮಾ ಮೇಲಿನ ಬದ್ಧತೆಯಿಂದಾಗಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ, ಪ್ರಸ್ತುತ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೂ ಸಹ, ಅವರು ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಾಕಾ’ ಚಿತ್ರದ ಚಿತ್ರೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ ಮತ್ತು ಅಟ್ಲಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ದೀಪಿಕಾ ಕಠಿಣವಾದ ಆ್ಯಕ್ಷನ್ ದೃಶ್ಯಗಳು ಮತ್ತು ರಾತ್ರಿ ಪಾಳಿಯ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಚಿತ್ರತಂಡದ ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಹೆರಿಗೆಯ ರಜೆ ತೆಗೆದುಕೊಳ್ಳುವ ಮುನ್ನ ಈ ಚಿತ್ರದ ಶೂಟಿಂಗ್ ಮುಗಿಸಿಕೊಡಲು ನಿರ್ಧರಿಸಿದ್ದಾರೆ. ಗರ್ಭಾವಸ್ಥೆಯ ಈ ಕಠಿಣ ಸಮಯದಲ್ಲಿಯೂ ಅವರು ಅತ್ಯಂತ ಸವಾಲಿನ ಮತ್ತು ಸಾಹಸ ದೃಶ್ಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ನಿಭಾಯಿಸುತ್ತಿರುವುದು ಸೆಟ್‌ನಲ್ಲಿದ್ದ ಎಲ್ಲರಿಗೂ ಪ್ರೇರಣೆಯಾಗಿದೆ. ದೀಪಿಕಾ ಅವರಿಗೆ ಈಗಾಗಲೇ ಒಂದೂವರೆ ವರ್ಷದ ಪುತ್ರಿ 'ದುವಾ' ಇದ್ದು, ಮನೆಯಲ್ಲಿ ಮಗುವಿನ ಜವಾಬ್ದಾರಿಯ ಜೊತೆಗೆ ಸಿನಿಮಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಚಿತ್ರರಂಗದಲ್ಲಿ ಕಲಾವಿದರ ಕೆಲಸದ ಸಮಯದ (8 ಗಂಟೆಗಳ ಶಿಫ್ಟ್) ಬಗ್ಗೆ ಕೇಳಿಬಂದಿದ್ದ ವಿವಾದಗಳಿಗೆ ಪ್ರತಿಕ್ರಿಯಿಸಿದ್ದ ದೀಪಿಕಾ, ಚಿತ್ರರಂಗದಲ್ಲಿ ವ್ಯವಸ್ಥಿತ ಬದಲಾವಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಆದರೆ, ತಮ್ಮ ಸಿನಿಮಾದ ಜವಾಬ್ದಾರಿಯನ್ನು ಪೂರೈಸಲು ಅವರು ಸದ್ಯ ಹಗಲಿರುಳು ಶ್ರಮಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ, ಅಲ್ಲು ಅರ್ಜುನ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿರುವ ‘ರಾಕಾ’ ಸಿನಿಮಾ 2027 ರಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ.

