ಮೋದಿಯನ್ನು ಮೆಚ್ಚಿಸಲು ಸುಳ್ಳು ಹೇಳಬೇಡಿ; ಪವನ್ ಕಲ್ಯಾಣ್ ವಿರುದ್ಧ ಕಿಡಿಕಾರಿದ ಪ್ರಕಾಶ್ ರಾಜ್
x

ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಡಿದ್ದ ಟ್ವೀಟ್ ವಿರುದ್ಧ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿಯನ್ನು ಮೆಚ್ಚಿಸಲು ಸುಳ್ಳು ಹೇಳಬೇಡಿ; ಪವನ್ ಕಲ್ಯಾಣ್ ವಿರುದ್ಧ ಕಿಡಿಕಾರಿದ ಪ್ರಕಾಶ್ ರಾಜ್

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಪವನ್ ಕಲ್ಯಾಣ್ ಸುಳ್ಳು ಹೇಳುತ್ತಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಕಿಡಿಕಾರಿದ್ದು, ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.


Click the Play button to hear this message in audio format

ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಡಿದ್ದ ಟ್ವೀಟ್ ವಿರುದ್ಧ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಸಂಬಂಧಿತ 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾದ ಬೆನ್ನಲ್ಲೇ ಉಭಯ ನಟರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ನಡೆದಿದೆ.

ಲೋಕಸಭೆಯಲ್ಲಿ ಶುಕ್ರವಾರ ಸಂಜೆ ನಡೆದ ಮತದಾನದಲ್ಲಿ ಮಸೂದೆಯ ಪರವಾಗಿ 298 ಸದಸ್ಯರು ಹಾಗೂ ವಿರುದ್ಧವಾಗಿ 230 ಸದಸ್ಯರು ಮತ ಚಲಾಯಿಸಿದ್ದರು. ಆದರೆ ವಿಶೇಷ ಬಹುಮತದ ಕೊರತೆಯಿಂದಾಗಿ ಈ ಮಸೂದೆ ಬಿದ್ದುಹೋಯಿತು. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಪವನ್ ಕಲ್ಯಾಣ್ ಅವರು, ವಿರೋಧ ಪಕ್ಷಗಳು ಮಹಿಳಾ ಸಬಲೀಕರಣದ ಐತಿಹಾಸಿಕ ಅವಕಾಶವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿವೆ ಎಂದು ಆರೋಪಿಸಿದ್ದರು. ವಿರೋಧ ಪಕ್ಷದ ನಿಲುವಿನಿಂದಾಗಿ ದೇಶದ ಪ್ರಜಾಪ್ರಭುತ್ವ ಮತ್ತು ಮಹಿಳಾ ನ್ಯಾಯಕ್ಕೆ ಹಿನ್ನಡೆಯಾಗಿದೆ. ರಾಜಕೀಯ ಲೆಕ್ಕಾಚಾರಕ್ಕಾಗಿ ರಾಷ್ಟ್ರದ ಪ್ರಗತಿಯನ್ನು ಬದಿಗೊತ್ತಲಾಗಿದೆ ಎಂದು ಅವರು ಟೀಕಿಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ದಾರ್ಶನಿಕ ನಾಯಕತ್ವವನ್ನು ಕೊಂಡಾಡಿದ್ದರು.

ಪವನ್ ಕಲ್ಯಾಣ್ ಅವರ ಈ ಪೋಸ್ಟ್ ಅನ್ನು ಮರುಹಂಚಿಕೊಂಡಿರುವ ಪ್ರಕಾಶ್ ರಾಜ್ ಅವರು ತಿರುಗೇಟು ನೀಡಿದ್ದಾರೆ. ಪವನ್ ಕಲ್ಯಾಣ್ ಅವರೇ, ಕೇವಲ ಮೋದಿಯವರನ್ನು ಮೆಚ್ಚಿಸಲು ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ಮಹಿಳಾ ಮೀಸಲಾತಿ ಮಸೂದೆಯು 2023ರಲ್ಲೇ ಅಂಗೀಕಾರವಾಗಿದೆ ಮತ್ತು ಅದನ್ನು ಜಾರಿಗೆ ತರಲು ಈಗಲೂ ಸಾಧ್ಯವಿದೆ. ಆದರೆ ನಿಮ್ಮ ತಂಡವು ಅದರ ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಜಾರಿಗೆ ತರಲು ಬಯಸುತ್ತಿದೆ. ಇದು ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯವನ್ನು ದುರ್ಬಲಗೊಳಿಸುತ್ತದೆ. ನಿಮ್ಮನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ ಆಂಧ್ರದ ಜನರ ಸ್ವಾಭಿಮಾನ ಮತ್ತು ಹಕ್ಕುಗಳನ್ನು ದಯವಿಟ್ಟು ಮಾರಾಟ ಮಾಡಬೇಡಿ ಎಂದು ಪ್ರಕಾಶ್ ರಾಜ್ ವಿನಂತಿಸಿದ್ದಾರೆ. ಅಲ್ಲದೆ ಈ ವಿಷಯದ ಬಗ್ಗೆ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ, ನೀವು ಸಿದ್ಧರಿದ್ದೀರಾ ಎಂದು ಸವಾಲು ಹಾಕಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯೊಂದಿಗೆ ಮಹಿಳಾ ಮೀಸಲಾತಿಯನ್ನು ಜೋಡಿಸಿರುವುದನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ. ಇದೇ ಕಾರಣಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೂಡ ಇದು ಮಹಿಳಾ ಮೀಸಲಾತಿ ಮಸೂದೆಯಲ್ಲ, ಬದಲಿಗೆ ಭಾರತದ ರಾಜಕೀಯ ಸ್ವರೂಪವನ್ನೇ ಬದಲಿಸುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.

Read More
Next Story