
ಅಮೆರಿಕದಲ್ಲಿ ಆಮೀರ್ ಖಾನ್ ಅವರ '3 ಇಡಿಯಟ್ಸ್' ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಇಡೀ ಥಿಯೇಟರ್ ಅನ್ನೇ ಬಾಡಿಗೆಗೆ ಪಡೆದ ಪಾಕ್ ಮೂಲದ ಉದ್ಯಮಿ
3 Idiots| '3 ಇಡಿಯಟ್ಸ್' ಪ್ರದರ್ಶನಕ್ಕೆ ಯುಎಸ್ ಥಿಯೇಟರ್ ಬುಕ್ ಮಾಡಿದ ಪಾಕ್ ಉದ್ಯಮಿ
ಆಮೀರ್ ಖಾನ್ ಅಭಿನಯದ 3 ಇಡಿಯಟ್ಸ್ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಪಾಕ್ ಮೂಲದ ಉದ್ಯಮಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಡೀ ಥಿಯೇಟರ್ ಅನ್ನೇ ಬಾಡಿಗೆಗೆ ಪಡೆದಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅಭಿನಯದ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾ ‘3 ಇಡಿಯಟ್ಸ್’ ಬಿಡುಗಡೆಯಾಗಿ ವರ್ಷಗಳೇ ಕಳೆದಿದ್ದರೂ ಅದರ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಇಡೀ ಥಿಯೇಟರ್ ಅನ್ನೇ ಬಾಡಿಗೆಗೆ ಪಡೆದಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಯುವ ಉದ್ಯಮಿ ಫರ್ಜಾ ಮಜೀದ್ ಎಂಬುವವರು ಚಿತ್ರಪ್ರೇಮಿಗಳ ಮುಖದಲ್ಲಿ ನಗು ಮೂಡಿಸಲು ಮತ್ತು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಸ್ಯಾನ್ ಫ್ರಾನ್ಸಿಸ್ಕೋದ ಮರೀನಾ ಥಿಯೇಟರ್‌ನಲ್ಲಿ ಬರೋಬ್ಬರಿ 250 ಆಸನಗಳ ಚಿತ್ರಮಂದಿರವನ್ನು ಮೇ 24 ರಂದು ನಡೆಯಲಿರುವ ಪ್ರದರ್ಶನಕ್ಕಾಗಿ ಅವರು ಕಾಯ್ದಿರಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಭಾರತದ ಹಿನ್ನೆಲೆಯನ್ನು ಹೊಂದಿರುವ, ಜೀವನದಲ್ಲಿ ಏನು ಮಾಡಬೇಕು ಎಂದು ಹುಡುಕಾಡುತ್ತಿರುವ ಮೂವರು ಸ್ನೇಹಿತರ ಸುಂದರ ಕಥೆ ಇದಾಗಿದೆ. ಜೀವನದಲ್ಲಿ ಜಸಿಯಾಗಿದ್ದವರಿಗೆ ಸ್ಫೂರ್ತಿ ತುಂಬಲು ಮತ್ತು ಮನರಂಜನೆ ನೀಡಲು ಈ ಚಿತ್ರವನ್ನು ಎಲ್ಲರೂ ಬಂದು ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ. ಈ ವಿಶೇಷ ಪ್ರದರ್ಶನವು ಇಂಗ್ಲಿಷ್ ಸಬ್‌ಟೈಟಲ್ಸ್ ಇರಲಿದ್ದು, ಒಬ್ಬರಿಗೆ ಒಂದು ಟಿಕೆಟ್ ಮಾತ್ರ ಲಭ್ಯವಿರಲಿದೆ ಎಂದು ಅವರು ತಿಳಿಸಿದ್ದಾರೆ.
ಫರ್ಜಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಜಗತ್ತಿನಾದ್ಯಂತದ ಸಿನಿಮಾ ಪ್ರೇಮಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಲ್ಲಿ ಇದೂ ಒಂದು ಎಂದು ಹಲವರು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವು ಬಳಕೆದಾರರು ಒಟಿಟಿ ವೇದಿಕೆಗಳಲ್ಲಿ ಈ ಚಿತ್ರದ ಹಕ್ಕುಗಳು ಮುಕ್ತಾಯಗೊಂಡಿರುವ ಕಾರಣ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಇದು ಅತ್ಯುತ್ತಮ ಅವಕಾಶ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ, ಚೇತನ್ ಭಗತ್ ಅವರ ಕಾದಂಬರಿ ಆಧಾರಿತ '3 ಇಡಿಯಟ್ಸ್' ಸಿನಿಮಾ ಇಂದಿಗೂ ಜಾಗತಿಕ ಮಟ್ಟದಲ್ಲಿ ಎಲ್ಲರ ನೆಚ್ಚಿನ ಚಿತ್ರವಾಗಿ ಉಳಿದುಕೊಂಡಿರುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

