
ವಿಮಾನವನ್ನು ‘ಟಾಯ್’, ‘ಲೆಗೋ ಏರ್ಪ್ಲೇನ್’ ಎಂದಿದ್ದ ನೋರಾ ಫತೇಹಿ ವಿರುದ್ಧ ಡ್ಯೂನ್ಸ್ ಏವಿಯೇಷನ್ ₹3 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದೆ.
‘ಟಾಯ್ ವಿಮಾನ’ ಹೇಳಿಕೆ ವಿವಾದ: ನೋರಾ ಫತೇಹಿ ವಿರುದ್ಧ 3 ಕೋಟಿ ರೂ. ಮಾನನಷ್ಟ ಕೇಸ್
ನೋರಾ ಅವರ ಹೇಳಿಕೆಗಳು ‘ಅಜಾಗರೂಕ’ ಮತ್ತು ‘ಬೇಜವಾಬ್ದಾರಿಯುತ’ವಾಗಿದ್ದು, ಸಂಸ್ಥೆಯ ಪ್ರತಿಷ್ಠೆ ಹಾಗೂ ವಾಣಿಜ್ಯ ಹಿತಾಸಕ್ತಿಗೆ ಹಾನಿ ಮಾಡಿವೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ.
ಬಾಲಿವುಡ್ ನಟಿ ನೋರಾ ಫತೇಹಿ ಅವರು ಚಾರ್ಟರ್ ವಿಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ಗಳು ಇದೀಗ ಕಾನೂನು ವಿವಾದಕ್ಕೆ ಕಾರಣವಾಗಿವೆ. ಡ್ಯೂನ್ಸ್ ಏವಿಯೇಷನ್ ಸಂಸ್ಥೆ ನೋರಾ ಫತೇಹಿ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ. ಗಾಂಧಿನಗರದ ನ್ಯಾಯಾಲಯದಲ್ಲಿ ಈ ಸಿವಿಲ್ ಮೊಕದ್ದಮೆ ದಾಖಲಾಗಿದೆ.
ಕಳೆದ ಡಿಸೆಂಬರ್ನಲ್ಲಿ ನೋರಾ ಫತೇಹಿ ಮುಂಬೈನಿಂದ ಜೈಪುರಕ್ಕೆ ಡ್ಯೂನ್ಸ್ ಏವಿಯೇಷನ್ ನಿರ್ವಹಿಸುತ್ತಿದ್ದ ಸೆಸ್ನಾ ಸೈಟೇಶನ್ ಸಿಜೆ2 ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ವಿಮಾನದೊಳಗಿನ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಅವರು ಬಳಿಕ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ವಿಮಾನವನ್ನು ‘ಮಿನಿಯೇಚರ್’, ‘ಟಾಯ್’ ಮತ್ತು ‘ಲೆಗೋ ಏರ್ಪ್ಲೇನ್’ ಎಂದು ಅವರು ಉಲ್ಲೇಖಿಸಿದ್ದರು.
ನೋರಾ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದ್ದರಿಂದ ಸಂಸ್ಥೆಯ ಖ್ಯಾತಿಗೆ ಧಕ್ಕೆಯಾಗಿದೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ. ನಟಿಗೆ ಇನ್ಸ್ಟಾಗ್ರಾಂನಲ್ಲಿ 4.6 ಕೋಟಿಗೂ ಹೆಚ್ಚು ಅನುಯಾಯಿಗಳಿದ್ದು, ಅವರ ಹೇಳಿಕೆಗಳು ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಿವೆ ಎಂದು ಕಂಪನಿ ತಿಳಿಸಿದೆ. ನೋರಾ ಅವರ ಹೇಳಿಕೆಗಳ ಬಳಿಕ ವಿಮಾನ ಬುಕ್ಕಿಂಗ್ನಲ್ಲಿ ಶೇ.15ರಿಂದ 20ರಷ್ಟು ಇಳಿಕೆಯಾಗಿದ್ದು, ರದ್ದತಿಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ವಿಮಾನ ಸುರಕ್ಷಿತವಾಗಿತ್ತು ಎಂದು ಡ್ಯೂನ್ಸ್ ಏವಿಯೇಷನ್ ವಾದ
ತಾನು ನಿರ್ವಹಿಸುತ್ತಿದ್ದ ಸೆಸ್ನಾ ಸೈಟೇಶನ್ ಸಿಜೆ2 ವಿಮಾನವು ಮುಂಬೈ-ಜೈಪುರ ಪ್ರಯಾಣಕ್ಕೆ ಸೂಕ್ತ ಗಾತ್ರದ್ದಾಗಿದ್ದು, ಅಸುರಕ್ಷಿತ ಅಥವಾ ಪ್ರಯಾಣಕ್ಕೆ ಯೋಗ್ಯವಲ್ಲದ ವಿಮಾನವಾಗಿರಲಿಲ್ಲ ಎಂದು ಡ್ಯೂನ್ಸ್ ಏವಿಯೇಷನ್ ಹೇಳಿದೆ. ವಿಮಾನವು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ದಿಂದ ಅಗತ್ಯ ಪ್ರಮಾಣೀಕರಣಗಳನ್ನು ಪಡೆದಿದ್ದು, ವಾಯುಯೋಗ್ಯವಾಗಿತ್ತು ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಮಾನ್ಯ ನಿಗದಿತವಲ್ಲದ ನಿರ್ವಾಹಕರ ಪರವಾನಗಿ (NSOP) ಅಡಿಯಲ್ಲಿ ವಿಮಾನವನ್ನು ಕಾನೂನುಬದ್ಧವಾಗಿ ನಿರ್ವಹಿಸಲಾಗುತ್ತಿತ್ತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
‘ಅಜಾಗರೂಕ ಮತ್ತು ಅವಹೇಳನಕಾರಿ ಹೇಳಿಕೆ’ ಎಂದ ಕಂಪನಿ
ನೋರಾ ಫತೇಹಿ ಅವರು ಯಾವುದೇ ತಾಂತ್ರಿಕ ಜ್ಞಾನ, ಪರಿಶೀಲನೆ ಅಥವಾ ವಾಸ್ತವಾಂಶದ ಆಧಾರವಿಲ್ಲದೆ ವಿಮಾನದ ಕುರಿತು ಅಜಾಗರೂಕ ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ. ಈ ಹೇಳಿಕೆಗಳಿಂದ ಸಂಸ್ಥೆಯ ಪ್ರತಿಷ್ಠೆ, ವಿಶ್ವಾಸಾರ್ಹತೆ ಮತ್ತು ವಾಣಿಜ್ಯ ವ್ಯವಹಾರಕ್ಕೆ ಗಂಭೀರ ಹಾನಿಯಾಗಿದೆ ಎಂದು ಕಂಪನಿ ಹೇಳಿದೆ.
ಸೆಪ್ಟೆಂಬರ್ 25ರಂದು ವಿಚಾರಣೆ
3 ಕೋಟಿ ರೂ. ಪರಿಹಾರ ಕೋರುವುದರ ಜೊತೆಗೆ, ನೋರಾ ಫತೇಹಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಬಂಧಿತ ಪೋಸ್ಟ್ಗಳು ಮತ್ತು ವಿಮಾನದ ಕುರಿತ ಹೇಳಿಕೆಗಳನ್ನು ತೆಗೆದುಹಾಕುವಂತೆ ನ್ಯಾಯಾಲಯಕ್ಕೆ ಡ್ಯೂನ್ಸ್ ಏವಿಯೇಷನ್ ಮನವಿ ಮಾಡಿದೆ. ಅಲ್ಲದೆ, ನಟಿಯಿಂದ ಸಾರ್ವಜನಿಕ ಸ್ಪಷ್ಟೀಕರಣ ನೀಡಿಸುವಂತೆಯೂ ಕೋರಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 25ರಂದು ನಡೆಸಲಿದೆ.

