
ನಿವೇದಿತಾ ಗೌಡ ಮತ್ತು ‘ಲೂಸ್ ಮಾದ’ ಯೋಗಿ ಅಭಿನಯದ ‘ಕುಮಾರಿ’ ಹಾಡು ಬಿಡುಗಡೆಯಾಗಿದೆ.
`ಬೇಲ್’ ಸಿನಿಮಾದ ‘ಕುಮಾರಿ’ ಹಾಡಿನಲ್ಲಿ ನಿವೇದಿತಾ ಗೌಡ-ಯೋಗಿ ಜುಗಲ್ಬಂದಿ
ವೆಂಕಟ್ ಕೆ. ನಾರಾಯಣ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ `ಬೇಲ್’ ಚಿತ್ರಕ್ಕೆ ಪವನ್ ಒಡೆಯರ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
‘ಲೂಸ್ ಮಾದ’ ಯೋಗಿ ಹಾಗೂ ನಿವೇದಿತಾ ಗೌಡ ಅವರ ಡ್ಯಾನ್ಸ್ನಿಂದ ‘ಬೇಲ್’ ಚಿತ್ರದ ‘ಕುಮಾರಿ’ ಹಾಡು ಗಮನ ಸೆಳೆಯುತ್ತಿದೆ. ಪವನ್ ಒಡೆಯರ್ ನಿರ್ದೇಶನದ ಬಹುತಾರಾಗಣದ ಈ ಸಿನಿಮಾದ ಹೊಸ ವಿಶೇಷ ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ನಿವೇದಿತಾ ಗೌಡ ಮತ್ತು ಯೋಗಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
‘ಕುಮಾರಿ’ ಹಾಡು ಸಿನಿಮಾದ ಪ್ರಚಾರಕ್ಕಾಗಿ ಪ್ರತ್ಯೇಕವಾಗಿ ಅಳವಡಿಸಿರುವ ಡ್ಯಾನ್ಸ್ ನಂಬರ್ ಅಲ್ಲ. ಚಿತ್ರದ ಕಥೆಯೊಳಗೆ ನಡೆಯುವ ಸಿನಿಮಾ ಶೂಟಿಂಗ್ ಸನ್ನಿವೇಶದ ಭಾಗವಾಗಿ ಈ ಹಾಡನ್ನು ರೂಪಿಸಲಾಗಿದೆ. ಹೀಗಾಗಿ ಹಾಡಿಗೆ ಸಿನಿಮಾದ ಕಥೆಯೊಂದಿಗೇ ನೇರ ಸಂಬಂಧವಿದೆ.
ಅಜನೀಶ್ ಲೋಕನಾಥ್ ಸಂಗೀತ, ಪವನ್ ಒಡೆಯರ್ ಸಾಹಿತ್ಯ
‘ಕುಮಾರಿ’ ಹಾಡಿಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಅವರೇ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಮತ್ತು ಮಂಗ್ಲಿ ಹಾಡಿಗೆ ಧ್ವನಿ ನೀಡಿದ್ದಾರೆ. ಹಾಡಿನ ನೃತ್ಯ ಸಂಯೋಜನೆ ಹಾಗೂ ವರ್ಣರಂಜಿತ ದೃಶ್ಯಗಳು ಸಿನಿಮಾದ ಕಮರ್ಷಿಯಲ್ ಟ್ರೀಟ್ಮೆಂಟ್ನ ಝಲಕ್ ನೀಡುತ್ತವೆ.
ಅಕ್ಟೋಬರ್ 2ರಂದು ‘ಬೇಲ್’ ಬಿಡುಗಡೆ
ವೆಂಕಟ್ ಕೆ. ನಾರಾಯಣ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಬೇಲ್’ಚಿತ್ರಕ್ಕೆ ಪವನ್ ಒಡೆಯರ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಡಾ. ಶಿವರಾಜ್ಕುಮಾರ್, ಸಾಯಿಕುಮಾರ್, ಮಲಯಾಳಂ ನಟ ಜಯರಾಮ್, ಯೋಗಿ, ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಬೇಲ್’ ಚಿತ್ರವು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ‘ಕುಮಾರಿ’ ಹಾಡಿನ ಮೂಲಕ ಚಿತ್ರತಂಡ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡಿದೆ.

