26 ವರ್ಷಗಳ ನಂತರ ಕಾಲಿವುಡ್‌ಗೆ ಮರಳಿದ ನಟ ನಾಸಿರುದ್ದೀನ್‌ ಶಾ
x

ನಸೀರುದ್ದೀನ್ ಶಾ

26 ವರ್ಷಗಳ ನಂತರ ಕಾಲಿವುಡ್‌ಗೆ ಮರಳಿದ ನಟ ನಾಸಿರುದ್ದೀನ್‌ ಶಾ

ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಓಂ ಚಾಪ್ಟರ್‌-1ಗೆ ನಾಸಿರುದ್ದೀನ್‌ ಶಾ ಎಂಟ್ರಿ ಕೊಟ್ಟಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಅವರು ಬರೋಬ್ಬರಿ 26 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ತಮಿಳು ಚಿತ್ರರಂಗಕ್ಕೆ ಭರ್ಜರಿಯಾಗಿ ಮರಳುತ್ತಿದ್ದಾರೆ. ಕಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ, ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರ 'ಓಂ: ಚಾಪ್ಟರ್ 1' ಚಿತ್ರತಂಡವನ್ನು ಅವರು ಅಧಿಕೃತವಾಗಿ ಸೇರಿಕೊಂಡಿದ್ದಾರೆ. ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ನಾಸಿರುದ್ದೀನ್‌ ಶಾ ಅವರ ಎಂಟ್ರಿ ದೊಡ್ಡ ಶಕ್ತಿ ತುಂಬಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.

ಧನುಷ್ ಅವರ ಒಡೆತನದ 'ವುಂಡರ್‌ಬಾರ್ ಫಿಲ್ಮ್ಸ್' ಮತ್ತು 'ಆರ್ ಟೇಕ್ ಸ್ಟುಡಿಯೋಸ್' ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರವು 2026ರ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ನಾಸಿರುದ್ದೀನ್‌ ಶಾ ಅವರು ಈ ಹಿಂದೆ 2000ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ಕಮಲ್ ಹಾಸನ್ ಅಭಿನಯದ ಪ್ರಸಿದ್ಧ 'ಹೇ ರಾಮ್' ಚಿತ್ರದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವುದೇ ತಮಿಳು ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ 'ಓಂ' ಚಿತ್ರದ ಮೂಲಕ ಕಾಲಿವುಡ್‌ಗೆ ಕಂಬ್ಯಾಕ್ ಮಾಡುತ್ತಿರುವುದು ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದರೊಂದಿಗೆ, ಸುಮಾರು ಮೂರು ದಶಕಗಳ ಹಿಂದೆ ತೆರೆಕಂಡಿದ್ದ 'ಪೊಂತನ್ ಮಾದ' ಎಂಬ ಮಲಯಾಳಂ ಕ್ಲಾಸಿಕ್ ಚಿತ್ರದ ನಂತರ ನಾಸಿರುದ್ದೀನ್‌ ಶಾ ಮತ್ತು ಮಮ್ಮುಟ್ಟಿ ಅವರು ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

'ಓಂ: ಚಾಪ್ಟರ್ 1 - ಉದಿರಂ: ದಿ ಬ್ಲಡ್ ವುಡ್' ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈ ಸಿನಿಮಾದ ಕಥೆಯು ರಕ್ತಚಂದನ ಮರಗಳ ಅಕ್ರಮ ಸಾಗಾಣಿಕೆ ಮತ್ತು ಕಳ್ಳಸಾಗಣೆದಾರರ ಸುತ್ತ ನಡೆಯಲಿದ್ದು, ನಟ ಧನುಷ್ ಇದರಲ್ಲಿ ಕಾಡಿನ ಕಾರ್ಮಿಕರನ್ನು ರಕ್ಷಿಸುವ ವಿಭಿನ್ನ ಮಾಸ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಧನುಷ್ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಬಜೆಟ್‌ನಲ್ಲಿ ತಯಾರಾಗುತ್ತಿರುವ ಚಿತ್ರಗಳಲ್ಲಿ ಇದು ಒಂದಾಗಿದ್ದು, ಇದರಲ್ಲಿ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಅಭ್ಯಂಕರ್ ಸಂಗೀತ ನಿರ್ದೇಶನ, ಶಿಲ್ ಅರಸು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರದ ಶೀರ್ಷಿಕೆಗೆ 'ಚಾಪ್ಟರ್ 1' ಎಂದು ಟ್ಯಾಗ್‌ಲೈನ್ ಇಟ್ಟಿರುವುದರಿಂದ, ಇದು ಮುಂದಿನ ದಿನಗಳಲ್ಲಿ ಬಹುಭಾಗಗಳ ಫ್ರಾಂಚೈಸಿಯಾಗಿ ಹೊರಹೊಮ್ಮಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.

Read More
Next Story