
28 ವರ್ಷಗಳ ಬಳಿಕ ತೆರೆಮೇಲೆ ನಾಗಾರ್ಜುನ–ಟಬು: ಡಿ.24ಕ್ಕೆ ‘ಕಿಂಗ್ 100’ ಬಿಡುಗಡೆ
ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಬಡತನವನ್ನು ಮೀರಿ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿ, ದೊಡ್ಡ ಸಾಮ್ರಾಜ್ಯವನ್ನು ಕಟ್ಟುವ ಕಥೆಯನ್ನು ಸಿನಿಮಾ ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.
ತೆಲುಗು ಚಿತ್ರರಂಗದ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರ ಬಹುನಿರೀಕ್ಷಿತ ‘ಕಿಂಗ್ 100’ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದ್ದು, ಡಿಸೆಂಬರ್ 24ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ. ನಾಗಾರ್ಜುನ ಅವರ 67ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಗ್ಲಿಂಪ್ಸ್ ವಿಡಿಯೊ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದೆ.
ಆಗಸ್ಟ್ 29ರಂದು ನಾಗಾರ್ಜುನ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಕಿಂಗ್ 100’ ಚಿತ್ರದ ಶೀರ್ಷಿಕೆ ಹಾಗೂ ಗ್ಲಿಂಪ್ಸ್ ವಿಡಿಯೊ ಬಿಡುಗಡೆ ಮಾಡಲಾಗಿದೆ. ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಆರ್. ಎ. ಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ.
ಬಿಡುಗಡೆಯಾಗಿರುವ ಗ್ಲಿಂಪ್ಸ್‌ನಲ್ಲಿ ನಾಗಾರ್ಜುನ ಅವರು ಐಷಾರಾಮಿ ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಬಡತನವನ್ನು ಮೀರಿ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿ, ದೊಡ್ಡ ಸಾಮ್ರಾಜ್ಯವನ್ನು ಕಟ್ಟುವ ಕಥೆಯನ್ನು ಸಿನಿಮಾ ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರವು ಕಮರ್ಷಿಯಲ್ ಆಕ್ಷನ್ ಮತ್ತು ಕುಟುಂಬ ಕಥಾಹಂದರವನ್ನು ಒಳಗೊಂಡಿದೆ.
28 ವರ್ಷಗಳ ಬಳಿಕ ನಾಗಾರ್ಜುನ–ಟಬು ಜೋಡಿ
‘ಕಿಂಗ್ 100’ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ನಾಗಾರ್ಜುನ ಮತ್ತು ಬಾಲಿವುಡ್ ನಟಿ ಟಬು ಅವರ ಪುನರ್ಮಿಲನವೂ ಒಂದಾಗಿದೆ. ಸುಮಾರು 28 ವರ್ಷಗಳ ಬಳಿಕ ಇಬ್ಬರೂ ಮತ್ತೊಮ್ಮೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ನಾಗಾರ್ಜುನ ಮತ್ತು ಟಬು ಜೋಡಿ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದು, ಅವರ ಜೋಡಿ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಬಹಳ ವರ್ಷಗಳ ಬಳಿಕ ಇಬ್ಬರು ಮತ್ತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಕುರಿತ ಕುತೂಹಲ ಹೆಚ್ಚಿಸಿದೆ.
ಸುಶ್ಮಿತಾ ಭಟ್ ಸೇರಿ ಹಲವು ಕಲಾವಿದರು
ಚಿತ್ರದಲ್ಲಿ ನಾಗಾರ್ಜುನ ಮತ್ತು ಟಬು ಅವರ ಜತೆಗೆ ಸುಶ್ಮಿತಾ ಭಟ್, ಐಶ್ವರ್ಯಾ ರಾಜೇಶ್, ರವೀಂದ್ರ ವಿಜಯ, ಸಾಯಿ ಕುಮಾರ್ ಹಾಗೂ ವಿಜಯೇಂದ್ರ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಆಕ್ಷನ್, ಕುಟುಂಬ ಕಥಾಹಂದರ ಹಾಗೂ ದೊಡ್ಡ ಮಟ್ಟದ ವಾಣಿಜ್ಯ ಅಂಶಗಳನ್ನು ಒಳಗೊಂಡಿರುವ ಚಿತ್ರವಾಗಿ ‘ಕಿಂಗ್ 100’ ರೂಪುಗೊಳ್ಳುತ್ತಿದೆ.
ಶಾರುಖ್ ಖಾನ್ ‘ಕಿಂಗ್’ ಜತೆ ಮುಖಾಮುಖಿ
‘ಕಿಂಗ್ 100’ ಡಿಸೆಂಬರ್ 24ರಂದು ವಿಶ್ವದಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಇದೇ ದಿನ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಹೀಗಾಗಿ ಕ್ರಿಸ್‌ಮಸ್ ಅವಧಿಯಲ್ಲಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಕಾಣಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಈ ಎರಡೂ ಸಿನಿಮಾಗಳ ನಡುವೆ ಪೈಪೋಟಿ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

