
ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಟೀಸರ್ ಬಿಡುಗಡೆಯಾಗಿದೆ.
‘ಮೈಸಾ’ ಟೀಸರ್ನಲ್ಲಿ ರಶ್ಮಿಕಾ ರೌದ್ರಾವತಾರ; ನೀರಿನೊಳಗೆ ಭರ್ಜರಿ ಫೈಟ್
ಚಿತ್ರದಲ್ಲಿ ರಶ್ಮಿಕಾ ಗೊಂಡ ಸಮುದಾಯದ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಟೀಸರ್ನಲ್ಲಿ ಅವರ ಪಾತ್ರ ಹಲವು ಸವಾಲುಗಳನ್ನು ಎದುರಿಸುತ್ತಾ ಪ್ರತಿರೋಧ ತೋರುವ ರೀತಿಯಲ್ಲಿ ಪರಿಚಯಿಸಲಾಗಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ತೆಲುಗು ಚಿತ್ರ ‘ಮೈಸಾ’ದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಶ್ಮಿಕಾ ಈ ಹಿಂದೆಂದೂ ಕಾಣಿಸದಂತಹ ತೀವ್ರ ಹಾಗೂ ರಗಡ್ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ.
ಚಿತ್ರದಲ್ಲಿ ಗೊಂಡ ಸಮುದಾಯದ ಮಹಿಳೆಯಾಗಿ ನಟಿಸಿರುವ ರಶ್ಮಿಕಾ, ಹಲವು ಸವಾಲುಗಳನ್ನು ಎದುರಿಸುತ್ತಾ ಪ್ರತಿರೋಧ ತೋರುವ ರೌದ್ರ ರೂಪದ ಪಾತ್ರಕ್ಕೆ ಜೀವ ತುಂಬಿದ್ದಾರೆ. ದೈಹಿಕವಾಗಿ ಕಠಿಣ ಸವಾಲೊಡ್ಡುವ ಆ್ಯಕ್ಷನ್ ದೃಶ್ಯಗಳು ಟೀಸರ್ನ ಪ್ರಮುಖ ಆಕರ್ಷಣೆಯಾಗಿವೆ.
ಮುಖ್ಯವಾಗಿ ನೀರಿನೊಳಗೆ ಎದುರಾಳಿಗಳೊಂದಿಗೆ ಹೋರಾಡುವ ದೃಶ್ಯಗಳು ಮತ್ತು ಕೈಯಲ್ಲಿ ಕುಡುಗೋಲು ಹಿಡಿದು ನಡೆಸುವ ಸಾಹಸ ದೃಶ್ಯಗಳು ರಶ್ಮಿಕಾ ಅವರ ವಿಭಿನ್ನ ಆ್ಯಕ್ಷನ್ ಶೈಲಿಯನ್ನು ಪರಿಚಯಿಸಿವೆ. ಮಣ್ಣು, ಜಲಪಾತ ಹಾಗೂ ಜಲಪಾತ್ರಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ದೃಶ್ಯಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿವೆ.
ಜೇಕ್ಸ್ ಬಿಜಾಯ್ ಅವರ ಸಂಗೀತ ಸಂಯೋಜನೆ ಹಾಗೂ ಅದ್ಧೂರಿ ತಾಂತ್ರಿಕ ಸ್ಪರ್ಶ ಹೊಂದಿರುವ ಈ ಚಿತ್ರದಲ್ಲಿ ಈಶ್ವರಿ ರಾವ್, ರಾಹುಲ್ ರವೀಂದ್ರನ್, ಸಮುದ್ರಖನಿ ಮತ್ತು ರಾವ್ ರಮೇಶ್ ಮುಂತಾದ ಪ್ರಮುಖ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಆ್ಯಕ್ಷನ್ ಪ್ರಧಾನ ಚಿತ್ರವು ನವೆಂಬರ್ 27ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

