
ಹಂಸಲೇಖಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನ ಸಾಧನೆ’ ಪ್ರಶಸ್ತಿ
ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ, ಸಮಿತಿಯು ಶಿಫಾರಸು ಮಾಡಿದ ಮೂವರು ಗಣ್ಯರ ಪಟ್ಟಿಯಲ್ಲಿ ಹಂಸಲೇಖ ಅವರ ಹೆಸರನ್ನು ಸರ್ಕಾರ ಸರ್ವಾನುಮತದಿಂದ ಅಂತಿಮಗೊಳಿಸಿದೆ.
ಕನ್ನಡ ಚಿತ್ರಸಂಗೀತದ ದಿಕ್ಕನ್ನೇ ಬದಲಿಸಿದ ಮೇರು ಸಾಧಕ, ಹಿರಿಯ ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರನ್ನು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ಪ್ರತಿಷ್ಠಿತ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಆಯ್ಕೆ ಮಾಡಿದೆ.
ಕರ್ನಾಟಕ ಸರ್ಕಾರವು ಜನವರಿ 13ರಂದು ರಚಿಸಿದ್ದ ವಿಶೇಷ ಆಯ್ಕೆ ಸಮಿತಿಯು ಫೆಬ್ರವರಿ 04ರಂದು ಸಭೆ ನಡೆಸಿತ್ತು. ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ, ಸಮಿತಿಯು ಶಿಫಾರಸು ಮಾಡಿದ ಮೂವರು ಗಣ್ಯರ ಪಟ್ಟಿಯಲ್ಲಿ ಹಂಸಲೇಖ ಅವರ ಹೆಸರನ್ನು ಸರ್ಕಾರ ಸರ್ವಾನುಮತದಿಂದ ಅಂತಿಮಗೊಳಿಸಿದೆ.
ಡಾ. ಹಂಸಲೇಖ ಅವರ ಸಾಧನೆ
ಹಂಸಲೇಖ ಅವರು ಸಂಗೀತ ನಿರ್ದೇಶನಕ್ಕೆ ಸೀಮಿತವಾಗದೆ ಗೀತ ರಚನೆ, ಚಿತ್ರಕಥೆ, ಸಂಭಾವನೆ ಹಾಗೂ ನಿರ್ದೇಶನದಲ್ಲೂ ಯಶಸ್ಸು ಕಂಡವರು. 80 ಮತ್ತು 90ರ ದಶಕದಲ್ಲಿ ಜಾನಪದ ಸೊಗಡನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಸಮ್ಮಿಲನಗೊಳಿಸಿ, ಕನ್ನಡ ಸಿನಿರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು.
ಸಂದ ಪ್ರಶಸ್ತಿಗಳು: ಈಗಾಗಲೇ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳ ಗೌರವ ಹೊಂದಿರುವ ಅವರ ಮುಕುಟಕ್ಕೆ ಈ 'ಜೀವಮಾನ ಸಾಧನೆ ಪ್ರಶಸ್ತಿ' ಮತ್ತೊಂದು ಮೈಲಿಗಲ್ಲಾಗಿದೆ.
ಇಂದು ಪ್ರಶಸ್ತಿ ಪ್ರದಾನ ಸಮಾರಂಭ
ಇಂದು ನಡೆಯಲಿರುವ ಚಿತ್ರೋತ್ಸವದ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಾರ್ತಾ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಮತ್ತು ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ ಮತ್ತು ಕಲಾತ್ಮಕ ನಿರ್ದೇಶಕ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಏಷ್ಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ವಿಭಾಗಗಳ ಸ್ಪರ್ಧಾ ವಿಜೇತರಿಗೂ ಇದೇ ವೇದಿಕೆಯಲ್ಲಿ ಗೌರವ ಸಲ್ಲಿಸಲಾಗುವುದು.
ಈ ಚಿತ್ರೋತ್ಸವದಲ್ಲಿ ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳಿದ್ದವು. ಏಷ್ಯನ್ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ಹಂಸಲೇಖ ಅವರೊಂದಿಗೆ ಅದೇ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಸಮಾರಂಭದಲ್ಲಿ ಸಾಧು ಕೋಕಿಲ, ಜಯಮಾಲಾ ಮತ್ತು ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

