x

ಪ್ರೇಕ್ಷಕರ ಮಾನ್ಯತೆಯೇ ದೊಡ್ಡದು ರಾಷ್ಟ್ರಪ್ರಶಸ್ತಿ ವಿಜೇತ 'ಮಿಥ್ಯ'ಗೆ ನಿರ್ದೇಶಕ ಸುಮಂತ್ ಭಟ್

ಚಿತ್ರದ ಕಥೆಗೆ ಪ್ರೇರಣೆ ಕೋವಿಡ್ ಅವಧಿಯಲ್ಲಿ ನಡೆದ ನೈಜ ಘಟನೆಯಿಂದ ಸಿಕ್ಕಿತು ಎಂದು ಸುಮಂತ್ ಭಟ್ ವಿವರಿಸಿದರು. ಕೋವಿಡ್ ಸಮಯದಲ್ಲಿ ಪರಿಚಯದ ಕುಟುಂಬವೊಂದರಲ್ಲಿ ದಂಪತಿ ಸಾವನ್ನಪ್ಪಿದ ನಂತರ ಉಳಿದ ಮಕ್ಕಳ ಪರಿಸ್ಥಿತಿ ತಮ್ಮನ್ನು ತೀವ್ರವಾಗಿ ಕಾಡಿತ್ತು.


Click the Play button to hear this message in audio format

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿರುವ ಕನ್ನಡದ 'ಮಿಥ್ಯ' ಚಿತ್ರದ ಯಶಸ್ಸು ನಿರೀಕ್ಷೆಗೂ ಮೀರಿದ ಸಂತಸ ತಂದಿದೆ ಎಂದು ಚಿತ್ರದ ನಿರ್ದೇಶಕ ಸುಮಂತ್ ಭಟ್ ಹೇಳಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ಘೋಷಣೆಯ ಬಳಿಕ ನಡೆದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿನಿಮಾ ಮಾಡುವಾಗ ಪ್ರಶಸ್ತಿಯನ್ನು ಗುರಿಯಾಗಿಟ್ಟುಕೊಂಡಿರಲಿಲ್ಲ. ಉತ್ತಮ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಮಾತ್ರ ಇತ್ತು ಎಂದು ಹೇಳಿದರು.

ಚಿತ್ರ ಥಿಯೇಟರ್‌ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಸೆಳೆಯದಿದ್ದರೂ, ಒಟಿಟಿ ಬಿಡುಗಡೆಯ ಬಳಿಕ ಹೆಚ್ಚು ಜನರಿಗೆ ತಲುಪಿತು. ಅದರ ನಡುವೆ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಒಂದಲ್ಲ, ಮೂರು ಪ್ರಶಸ್ತಿಗಳು ದೊರೆತಿರುವುದು ತಂಡದ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಮಾನ್ಯತೆ ಎಂದು ಅವರು ತಿಳಿಸಿದರು. ವಿಶೇಷವಾಗಿ ಅತ್ಯುತ್ತಮ ಬಾಲನಟ ಪ್ರಶಸ್ತಿ ಆತೀಶ್ ಶೆಟ್ಟಿ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ರೂಪಾ ವರ್ಕಾಡಿಗೆ ಬಂದಿರುವುದು ನಿರ್ದೇಶಕರಾಗಿ ಹೆಚ್ಚು ಸಂತಸ ತಂದಿದೆ ಎಂದರು.

ನೈಜ ಘಟನೆಯ ಪ್ರೇರಣೆ

ಚಿತ್ರದ ಕಥೆಗೆ ಪ್ರೇರಣೆ ಕೋವಿಡ್ ಅವಧಿಯಲ್ಲಿ ನಡೆದ ನೈಜ ಘಟನೆಯಿಂದ ಸಿಕ್ಕಿತು ಎಂದು ಸುಮಂತ್ ಭಟ್ ವಿವರಿಸಿದರು. ಕೋವಿಡ್ ಸಮಯದಲ್ಲಿ ಪರಿಚಯದ ಕುಟುಂಬವೊಂದರಲ್ಲಿ ದಂಪತಿ ಸಾವನ್ನಪ್ಪಿದ ನಂತರ ಉಳಿದ ಮಕ್ಕಳ ಪರಿಸ್ಥಿತಿ ತಮ್ಮನ್ನು ತೀವ್ರವಾಗಿ ಕಾಡಿತ್ತು. ಆಘಾತವನ್ನು ಮಕ್ಕಳು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬ ಪ್ರಶ್ನೆಯೇ 'ಮಿಥ್ಯ' ಚಿತ್ರದ ಕಥೆಯಾಗಿ ರೂಪುಗೊಂಡಿತು ಎಂದು ಹೇಳಿದರು. ತಮ್ಮ ವೈಯಕ್ತಿಕ ಬಾಲ್ಯದ ಕೆಲವು ಅನುಭವಗಳೂ ಕಥೆಯಲ್ಲಿ ಬೆರೆತಿವೆ ಎಂದರು.

ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದ ಆತೀಶ್ ಶೆಟ್ಟಿ ಮಾತನಾಡಿ, 'ಮಿಥ್ಯ' ಪಾತ್ರ ನಿರ್ವಹಿಸುವುದು ಆರಂಭದಲ್ಲಿ ಸವಾಲಾಗಿತ್ತು. ನಿರ್ದೇಶಕರ ಮಾರ್ಗದರ್ಶನದಲ್ಲಿ ಸುಮಾರು ಒಂದು ತಿಂಗಳ ವರ್ಕ್‌ಶಾಪ್ ನಡೆಸಿದ ಬಳಿಕ ಪಾತ್ರವನ್ನು ಅರ್ಥಮಾಡಿಕೊಂಡು ಅಭಿನಯಿಸಲು ಸಾಧ್ಯವಾಯಿತು ಎಂದು ಹೇಳಿದರು. ರಾಷ್ಟ್ರೀಯ ಪ್ರಶಸ್ತಿ ಪಡೆಯುವುದು ತಮ್ಮ ಕನಸಾಗಿತ್ತು. ಬಾಲನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಿಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಪ್ರಶಸ್ತಿ ಘೋಷಣೆಯಾದ ಕ್ಷಣ ಜೀವನದ ಮರೆಯಲಾಗದ ಅನುಭವವಾಗಿದೆ ಎಂದು ಆತೀಶ್ ತಿಳಿಸಿದರು.

ಚಿತ್ರದ ಪಾತ್ರಗಳಿಗೆ ಕಲಾವಿದರ ಆಯ್ಕೆ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿತ್ತು ಎಂದು ಸುಮಂತ್ ಭಟ್ ಹೇಳಿದರು. ಸುಮಾರು 20ಕ್ಕೂ ಹೆಚ್ಚು ಮಕ್ಕಳ ಆಡಿಷನ್ ನಡೆಸಿದ ಬಳಿಕ ಆತೀಶ್ ಅವರನ್ನು ಆಯ್ಕೆ ಮಾಡಲಾಯಿತು. ಉಡುಪಿ ಭಾಗದ ಭಾಷೆ, ಸ್ಥಳೀಯ ಸಂಸ್ಕೃತಿ ಹಾಗೂ ಪಾತ್ರದ ಭಾವನಾತ್ಮಕ ಸಂಕೀರ್ಣತೆಯನ್ನು ನಿರ್ವಹಿಸಬಲ್ಲ ಕಲಾವಿದರ ಅಗತ್ಯವಿದ್ದ ಕಾರಣ ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತು ಎಂದು ವಿವರಿಸಿದರು.

ಚಿತ್ರದ ಯಶಸ್ಸಿನಲ್ಲಿ ಛಾಯಾಗ್ರಾಹಕ ಉದಿತ್ ಖುರಾನಾ, ನಟರಾದ ಪ್ರಕಾಶ್ ತುಮಿನಾಡು, ರೂಪಾ ವರ್ಕಾಡಿ ಸೇರಿದಂತೆ ಇಡೀ ತಂಡದ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಕ್ಕೆ ಹೊಸ ಆಯಾಮ ನೀಡಿದ್ದು, ನಿರ್ದೇಶಕರ ಕಲ್ಪನೆಗಿಂತಲೂ ಹೆಚ್ಚಿನ ಪರಿಣಾಮವನ್ನು ತೆರೆಗೆ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಸುಮಂತ್ ಭಟ್, ಚಿತ್ರರಂಗವು ತನ್ನನ್ನು ತಾನೇ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಉತ್ತಮ ಕಥೆ, ಸಮರ್ಪಕ ತಯಾರಿ ಹಾಗೂ ಹೊಸ ಪ್ರಯೋಗಗಳಿಗೆ ಹೆಚ್ಚಿನ ಅವಕಾಶ ನೀಡಿದಾಗ ಮಾತ್ರ ಪ್ರೇಕ್ಷಕರ ವಿಶ್ವಾಸ ಮತ್ತೆ ಗಳಿಸಲು ಸಾಧ್ಯವಾಗುತ್ತದೆ. ಉತ್ತಮ ಸಿನಿಮಾಗಳು ನಿರಂತರವಾಗಿ ಬರಬೇಕು. ಒಂದು ಅಥವಾ ಎರಡು ಯಶಸ್ವಿ ಸಿನಿಮಾಗಳಿಂದ ಮಾತ್ರ ಚಿತ್ರರಂಗದ ಸ್ಥಿತಿ ಬದಲಾಗುವುದಿಲ್ಲ ಎಂದು ಹೇಳಿದರು.

ಕರಾವಳಿ ಭಾಗದ ಕಥೆಗಳು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಆಧರಿಸಿದ ಸಿನಿಮಾಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ರೀತಿಯ ಪ್ರಯೋಗಗಳು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕಥೆಗಳಲ್ಲೂ ಆಗಬೇಕು. ಪ್ರಾದೇಶಿಕ ಸಂಸ್ಕೃತಿಯನ್ನು ಉಳಿಸಿಕೊಂಡು ವಿಶ್ವಮಟ್ಟದ ಕಥೆಗಳನ್ನು ಹೇಳುವ ಪ್ರಯತ್ನಗಳು ಹೆಚ್ಚಾದರೆ ಕನ್ನಡ ಚಿತ್ರರಂಗ ಮತ್ತಷ್ಟು ಬೆಳೆಯಲಿದೆ ಎಂದು ಹೇಳಿದರು.

Read More
Next Story