
Cinema Review| ತಂತ್ರ, ಪ್ರತಿತಂತ್ರ, ಕುತಂತ್ರಗಳ ಸುತ್ತ ‘ಮಾರ್ಕ್’
‘ಮಾರ್ಕ್’ ಒಂದು ಅಪ್ಪಟ ಅಭಿಮಾನಿಗಳ ಸಿನಿಮಾ. ಸುದೀಪ್ ಅಭಿಮಾನಿಗಳಿಗೆ ಖಂಡಿತಾ ಈ ಚಿತ್ರ ಖುಷಿಯಾಗುತ್ತದೆ. ನೀವು ಅಭಿಮಾನಿಯಾಗಿರಬೇಕು ಅಷ್ಟೇ.
‘ಮಾರ್ಕ್’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ಚಿತ್ರವು ‘ಮಾಕ್ಸ್’ನ ಮುಂದುವರೆದ ಭಾಗದಂತಿದೆ ಎಂದು ಹಲವರು ಹೇಳಿದ್ದರು ‘ಮಾರ್ಕ್’, ‘ಮ್ಯಾಕ್ಸ್’ ಚಿತ್ರದ ಮುಂದುವರೆದ ಭಾಗ ಎನ್ನುವುದುಕ್ಕಿಂತ ಅದೇ ಶೈಲಿಯ ಇನ್ನೊಂದು ಸಿನಿಮಾ ಎನ್ನಬಹುದು. ಅಲ್ಲಿ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಎಂಬ ಸಸ್ಪೆಂಡೆಡ್ ಪೊಲೀಸ್ ಅಧಿಕಾರಿಯ ಸಾಸಹಗಳನ್ನು ತೋರಿಸಲಾಗಿತ್ತು. ಇಲ್ಲಿ ಅಜಯ್ ಮಾರ್ಕಂಡೇಯ ಅಲಿಯಾಸ್ ಮಾರ್ಕ್ ಎಂಬ ಇನ್ನೊಬ್ಬ ಸಸ್ಪೆಂಡೆಡ್ ಪೊಲೀಸ್ ಅಧಿಕಾರಿಯ ಕುರಿತ ಚಿತ್ರವಾಗಿದೆ.
ಇಲ್ಲಿ ಒಂದು ಕಥೆ ಎನ್ನುವುದಕ್ಕಿಂತ ಮೂರು ಬೇರೆ ಟ್ರ್ಯಾಕ್‍ಗಳಿವೆ. ಮೊದಲನೆಯದರಲ್ಲಿ ಪೊಲೀಸರು ಎರಡು ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುತ್ತಾರೆ. ಎರಡನೆಯದರಲ್ಲಿ 18 ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿರುತ್ತಾರೆ. ಮೂರನೆಯದರಲ್ಲಿ ಮುಖ್ಯಮಂತ್ರಿಯನ್ನು ಅವರ ಮಗನೇ ಕೊಂದು, ಮುಂದಿನ ಮುಖ್ಯಮಂತ್ರಿಯಾಗುವುದಕ್ಕೆ ಮುಂದಾಗಿರುತ್ತಾನೆ. ಈ ಮೂರೂ ಪ್ರಕರಣಗಳು ಬೇರೆಬೇರೆಯಾದರೂ, ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ಮಾರ್ಕ್ ಅಮಾನಿತನಲ್ಲಿರುವುದರಿಂದ ಯಾವುದನ್ನೂ ತನಿಖೆ ಮಾಡುವ ಹಾಗಿಲ್ಲ. 18 ಮಕ್ಕಳ ಪೈಕಿ ಒಂದು ಮಗು, ಮಾರ್ಕ್ಗೆ ಪರೋಕ್ಷವಾಗಿ ಸಂಬಂಧಿಸಿದ್ದರಿಂದ ಆತ ತನ್ನದೇ ರೀತಿಯಲ್ಲಿ ತನಿಖೆ ಶುರು ಮಾಡುತ್ತಾನೆ. ಹಾಗೆ ಹೋದಾಗ, ಒಂದರಹಿಂದೊಂದು ತಿರುವುಗಳು ಸಿಗುತ್ತವೆ. ಮುಂದೇನಾಗುತ್ತದೆ ಎಂಬುದು ಚಿತ್ರದಲ್ಲೇ ನೋಡಬೇಕು.
ಮೊದಲೇ ಹೇಳಿದಂತೆ ‘ಮ್ಯಾಕ್ಸ್’ ಮತ್ತು ‘ಮಾರ್ಕ್’ ಕಥೆಯ ನಡುವೆ ಯಾವುದೇ ಸಂಬಂಧ ಇಲ್ಲದಿದ್ದರೂ, ಇದು ಅದೇ ಶೈಲಿಯ ಸಿನಿಮಾ. ಬಹುಶಃ ಅದೇ ತಂಡ ಈ ಚಿತ್ರದ ಹಿಂದಿರುವುದರಿಂದ ಹಾಗೆ ಅನಿಸುವುದು ಸಹಜ. ಆ ಚಿತ್ರವು ಒಂದು ರಾತ್ರಿಯಲ್ಲಿ ನಡೆಯುವ ಕಥೆಯಾಗಿತ್ತು. ಆದರೆ, ‘ಮಾರ್ಕ್’, ಎರಡು ರಾತ್ರಿ ಮತ್ತು ಒಂದು ಹಗಲು ನಡೆಯುವ ಕಥೆಯಾಗಿದೆ. ಫ್ಲಾಶ್‍ಬ್ಯಾಕ್ ಮತ್ತು ರಿಯಾಲಿಟಿಗಳ ನಡುವೆ ಚಿತ್ರ ಸಾಗುತ್ತಿರುತ್ತದೆ. ಇಡೀ ಚಿತ್ರ ತಂತ್ರ, ಪ್ರತಿತಂತ್ರ ಮತ್ತು ಕುತಂತ್ರಗಳ ಸುತ್ತ ಸಾಗುತ್ತದೆ. ವಿಲನ್‍ಗಳು ಮಾಡುವ ಪ್ರತಿ ತಂತ್ರಕ್ಕೂ, ನಾಯಕ ಪ್ರತಿತಂತ್ರ ರೂಪಿಸಿ ಒಂದು ಹೆಜ್ಜೆ ಮುಂದೆ ಇರುತ್ತಾನೆ. ಕುತಂತ್ರಗಳಿಂದ ಆಗಾಗ ಹಿನ್ನೆಡೆ ಉಂಟಾದರೂ, ಅವೆಲ್ಲವನ್ನೂ ಹೇಗೆ ಮೆಟ್ಟಿ ನಿಲ್ಲುತ್ತಾನೆ ಎನ್ನುವುದೇ ಚಿತ್ರದ ಕಥೆ.
|
ಇದು ಅಭಿಮಾನಿಗಳಿಗೆ ಮಾಡಿರುವ ಮತ್ತು ಸಿದ್ಧಸೂತ್ರಗಳಿಂದ ತುಂಬಿತುಳುಕುತ್ತಿರುವ ಸಿನಿಮಾ ಆದರೂ, ವಿಜಯ್ ಕಾರ್ತಿಕೇಯ ಒಬ್ಬ ಬರಹಗಾರನಾಗಿ ಗಮನಸೆಳೆಯುತ್ತಾರೆ. ಏಕೆಂದರೆ, ಮೂರು ಪ್ರಕರಣಗಳನ್ನು ಒಂದಕ್ಕೊಂದು ಬೆಸೆದು, ನಂಬುವಂತೆ ಮಾಡುವುದು ಸುಲಭದ ಕೆಲಸವಲ್ಲ. ಆ ನಿಟ್ಟಿನಲ್ಲಿ ವಿಜಯ್ ಕಾರ್ತಿಕೇಯ ಬಹಳ ಟ್ರಿಕ್ಕಿಯಾದ ಚಿತ್ರಕಥೆಯನ್ನು ಬರೆದಿದ್ದಾರೆ. ಇಲ್ಲಿ ಹಲವು ತಿರುವುಗಳು, ಕುತಂತ್ರಗಳು, ಷಡ್ಯಂತ್ರಗಳು ಇವೆ. ಚಿತ್ರ ಆರಂಭದಿಂದ ಕೊನೆಯವರೆಗೂ ವೇಗವಾಗಿ ಸಾಗುತ್ತದೆ. ಭಾವನಾತ್ಮಕವಾಗಿ ಚಿತ್ರ ಎಲ್ಲೂ ಕನೆಕ್ಟ್ ಆಗುವುದಿಲ್ಲ ಎಂಬ ವಿಷಯ ಬಿಟ್ಟರೆ, ಚಿತ್ರ ಉಸಿರು ಬಿಗಿಹಿಡಿದು ನೋಡಿಸಿಕೊಂಡು ಹೋಗುತ್ತದೆ.
ಇಡೀ ಚಿತ್ರವನ್ನು ಸುದೀಪ್ ಆವರಿಸಿಕೊಂಡಿದ್ದಾರೆ. ಹಾಡು, ಫೈಟು, ಅಭಿನಯ ಎಲ್ಲದರಲ್ಲೂ ಅವರು ತಮ್ಮ ಅಭಿಮಾನಿಗಳಿಂದ ‘ಮಾರ್ಕ್ಸ್’ ಗಿಟ್ಟಿಸಿಕೊಳ್ಳುತ್ತಾರೆ. ಅವರ ಎದುರು ತೊಡೆತಟ್ಟುವುದಕ್ಕೆ ಮೂವರು ವಿಲನ್‍ಗಳಿದ್ದಾರೆ. ಈ ಪೈಕಿ ನವೀನ್ ಚಂದ್ರ ಗಮನಸೆಳೆಯುತ್ತಾರೆ. ಮಿಕ್ಕಂತೆ, ಯೋಗಿ ಬಾಬು, ಟಾಮ್ ಚಾಕೋ ಮತ್ತು ಗುರು ಸೋಮಸುಂದರಂ ಅಭಿನಯ ಕನೆಕ್ಟ್ ಆಗುವುದಿಲ್ಲ. ಅವರ ತುಟಿಚಲನೆ, ಬಾಡಿಲಾಂಗ್ವೇಜ್ ಹೊಂದಾಣಿಕೆ ಆಗುವುದಿಲ್ಲ. ಕನ್ನಡವಲ್ಲದೆ, ಬೇರೆ ಭಾಷೆಗಳಿಗೂ ಚಿತ್ರ ಡಬ್ ಆಗುತ್ತಿರುವುದರಿಂದ, ಅವರಿಂದ ಅನಿವಾರ್ಯವಾಗಿ ಪಾತ್ರ ಮಾಡಿಸಿರುವ ಸಾಧ್ಯತೆ ಇದೆ.
ಮಿಕ್ಕಂತೆ ಗೋಪಾಲಕೃಷ್ಣ ದೇಶಪಾಂಡೆ, ರಾಘು ರಾಮನಕೊಪ್ಪ, ರೋಶನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ಹಾಸನ್, ಚಿತ್ರಾ ಶೆಣೈ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ‘ಮಾರ್ಕ್’ ಮಾಯೆಯಲ್ಲಿ ಅವರ್ಯಾರೂ ಕಾಣುವುದೇ ಇಲ್ಲ. ಸುದೀಪ್ ಅಲ್ಲದೆ ಚಿತ್ರದಲ್ಲಿ ಗಮನಸೆಳೆಯುವ ಇನ್ನಷ್ಟು ಅಂಶಗಳೆಂದರೆ, ಅದು ಶೇಖರ್ ಚಂದ್ರು ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ.
‘ಮಾರ್ಕ್’ ಒಂದು ಅಪ್ಪಟ ಅಭಿಮಾನಿಗಳ ಸಿನಿಮಾ. ಸುದೀಪ್ ಅಭಿಮಾನಿಗಳಿಗೆ ಖಂಡಿತಾ ಈ ಚಿತ್ರ ಖುಷಿಯಾಗುತ್ತದೆ. ನೀವು ಅಭಿಮಾನಿಯಾಗಿರಬೇಕು ಅಷ್ಟೇ.

