
ಅನಾರೋಗ್ಯದ ಕಾರಣ ಕಾರ್ಯಕ್ರಮ ರದ್ದಾಗಿರುವುದಕ್ಕೆ ಆಯೋಜಕರು ಹಾಗೂ ತಮ್ಮನ್ನು ಭೇಟಿಯಾಗಲು ಕಾತರರಾಗಿದ್ದವರಲ್ಲಿ ಮಮಿತಾ ಕ್ಷಮೆಯಾಚಿಸಿದ್ದಾರೆ.
ಜನ ನಾಯಗನ್ ಸಿನಿಮಾ ಖ್ಯಾತಿಯ ನಟಿ ಮಮಿತಾ ಬೈಜು ಆಸ್ಪತ್ರೆಗೆ ದಾಖಲು
ಮಮಿತಾ ಬೈಜು, ಸೆಪ್ಟೆಂಬರ್ 5ರಂದು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ‘ಲೆಂಡಾಕ್ಸಿಸ್ ಕ್ಲೈಡ್ ಓಣಂ 2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ನಟಿ ಮಮಿತಾ ಬೈಜು ಅವರು ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಈ ವಾರ ಆಸ್ಟ್ರೇಲಿಯಾಕ್ಕೆ ತೆರಳಿ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರ ಪ್ರವಾಸ ರದ್ದಾಗಿದೆ.
ಪ್ರೇಮಲು ಹಾಗೂ ಜನ ನಾಯಗನ್ ಸಿನಿಮಾಗಳಲ್ಲಿನ ಅಭಿನಯದ ಮೂಲಕ ಗಮನ ಸೆಳೆದಿರುವ ಮಮಿತಾ ಬೈಜು, ಸೆಪ್ಟೆಂಬರ್ 5ರಂದು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ‘ಲೆಂಡಾಕ್ಸಿಸ್ ಕ್ಲೈಡ್ ಓಣಂ 2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರು ಪ್ರಯಾಣಿಸದಂತೆ ಹಾಗೂ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ.
ತಾವು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಮಿತಾ ವಿಡಿಯೊ ಮೂಲಕ ಅಭಿಮಾನಿಗಳು ಹಾಗೂ ಕಾರ್ಯಕ್ರಮಕ್ಕೆ ಕಾಯುತ್ತಿದ್ದವರಿಗೆ ತಿಳಿಸಿದ್ದಾರೆ. ಆರೋಗ್ಯ ಪರಿಸ್ಥಿತಿಯಿಂದಾಗಿ ನಿಗದಿತ ದಿನಾಂಕದಂದು ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಓಣಂ ಕಾರ್ಯಕ್ರಮ ಮುಂದೂಡಿಕೆ
ಮಮಿತಾ ಅವರ ಪ್ರವಾಸ ರದ್ದಾದ ಹಿನ್ನೆಲೆಯಲ್ಲಿ ಕ್ಲೈಡ್ ಮಲಯಾಳಿ ಅಸೋಸಿಯೇಷನ್ ಕಾರ್ಯಕ್ರಮವನ್ನು ಮುಂದೂಡಿದೆ. ಮಮಿತಾ ಅವರ ತಂಡ ಹಾಗೂ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದ ಆಯೋಜಕರೊಂದಿಗೆ ಚರ್ಚಿಸಿ ಹೊಸ ದಿನಾಂಕ ನಿಗದಿಪಡಿಸಲಾಗುತ್ತಿದೆ. ಹೊಸ ದಿನಾಂಕ ಅಂತಿಮವಾದ ಬಳಿಕ ಘೋಷಿಸುವುದಾಗಿ ಸಂಘಟನೆ ತಿಳಿಸಿದೆ.
ಆಸ್ಟ್ರೇಲಿಯಾ ಅಭಿಮಾನಿಗಳನ್ನು ಭೇಟಿಯಾಗುವ ನಿರೀಕ್ಷೆ
ಅನಾರೋಗ್ಯದ ಕಾರಣ ಕಾರ್ಯಕ್ರಮ ರದ್ದಾಗಿರುವುದಕ್ಕೆ ಆಯೋಜಕರು ಹಾಗೂ ತಮ್ಮನ್ನು ಭೇಟಿಯಾಗಲು ಕಾತರರಾಗಿದ್ದವರಲ್ಲಿ ಮಮಿತಾ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಲೈಡ್ ಕುಟುಂಬವನ್ನು ಭೇಟಿ ಮಾಡುವ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಮಿತಾ ಬೈಜು ಅಭಿನಯದ ಬೆತ್ಲಹೆಮ್ ಫ್ಯಾಮಿಲಿ ಯೂನಿಟ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

