
ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ ವಿಜಯ್ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ
Vijay Thalapathy| ಚುನಾವಣಾ ಅಫಿಡವಿಟ್‌ನಲ್ಲಿ 100 ಕೋಟಿ ರೂ. ಆಸ್ತಿ ಮರೆಮಾಚಿದ ಆರೋಪ: ನಟ ವಿಜಯ್‌ಗೆ ಹೈಕೋರ್ಟ್ ನೋಟಿಸ್
ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ ವಿಜಯ್ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಮಿಳುನಾಡು ಚುನಾವಣೆಯಲ್ಲಿ ತಮ್ಮ ಪಕ್ಷವಾದ ಟಿವಿಕೆ ಮೂಲಕ ಚುನಾವಣಾ ಕಣದಲ್ಲಿರುವ ನಟ ವಿಜಯ್ ಅವರಿಗೆ ಮದ್ರಾಸ್ ಹೈಕೋರ್ಟ್‌ನಿಂದ ಹಿನ್ನಡೆಯಾಗಿದೆ. ವಿಜಯ್ ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಾಲಯವು ಆದಾಯ ತೆರಿಗೆ ತನಿಖೆಗೆ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು, ಅಫಿಡವಿಟ್‌ನಲ್ಲಿ ಸುಮಾರು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವ್ಯತ್ಯಾಸವಿರುವುದನ್ನು ಮೌಖಿಕವಾಗಿ ಗಮನಿಸಿದೆ. ಇದನ್ನು ಗಂಭೀರ ಅಕ್ರಮ ಎಂದು ಬಣ್ಣಿಸಿರುವ ನ್ಯಾಯಾಲಯವು, ಈ ಬಗ್ಗೆ ವಿವರಣೆ ಕೋರಿ ನಟ ವಿಜಯ್, ಆದಾಯ ತೆರಿಗೆ ಇಲಾಖೆಯ ಮಹಾನಿರ್ದೇಶಕರು, ಚುನಾವಣಾ ಆಯೋಗ ಮತ್ತು ಪೆರಂಬೂರ್ ಹಾಗೂ ತಿರುಚ್ಚಿರಾಪಳ್ಳಿ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಚೆನ್ನೈನ ವಿ. ವಿಘ್ನೇಶ್ ಎಂಬುವವರು ಈ ಅರ್ಜಿಯನ್ನು ಸಲ್ಲಿಸಿದ್ದು, ವಿಜಯ್ ಅವರು ತಿರುಚ್ಚಿ ಮತ್ತು ಪೆರಂಬೂರ್ ಕ್ಷೇತ್ರಗಳಲ್ಲಿ ಸಲ್ಲಿಸಿದ ಅಫಿಡವಿಟ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸಗಳಿವೆ ಎಂದು ದೂರಿದ್ದಾರೆ. ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಮತ್ತು ಇದು ಕೇವಲ ತಾಂತ್ರಿಕ ದೋಷವಾಗಿರಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಒಂದು ವೇಳೆ ಈ ಆರೋಪಗಳು ಸಾಬೀತಾದಲ್ಲಿ, ಜನಪ್ರತಿನಿಧಿ ಕಾಯ್ದೆಯಡಿ ವಿಜಯ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳ್ಳುವ ಸಾಧ್ಯತೆಯಿದೆ ಮತ್ತು ಕ್ರಿಮಿನಲ್ ಕ್ರಮಗಳನ್ನು ಎದುರಿಸಬೇಕಾಗಬಹುದು. ಆಸ್ತಿ ವಿವರಗಳ ಮರೆಮಾಚುವಿಕೆಯು ಆದಾಯ ತೆರಿಗೆ ಕಾಯ್ದೆಯಡಿ ದಂಡ ಮತ್ತು ಕಾನೂನು ಕ್ರಮಗಳಿಗೂ ದಾರಿಯೊಡಲಿದೆ.
ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಮತ್ತು ನಟ ವಿಜಯ್ ಅವರು ತಮ್ಮ ಚುನಾವಣಾ ಪ್ರಚಾರದ ಅಂತಿಮ ಹಂತವನ್ನು ಅತ್ಯಂತ ಬಿರುಸಿನಿಂದ ಆರಂಭಿಸಿದ್ದಾರೆ. ಸೋಮವಾರದಂದು ಅವರು ತಿರುವಳ್ಳೂರು ಜಿಲ್ಲೆ ಮತ್ತು ಚೆನ್ನೈನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಬೆಳಿಗ್ಗೆ 11:30 ರ ಸುಮಾರಿಗೆ ತಿರುವಳ್ಳೂರು ಜಿಲ್ಲೆಯ ಪೊನ್ನೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪಂಚೆಟ್ಟಿಯಲ್ಲಿ ತಮ್ಮ ವಾಹನ ರ್ಯಾಲಿಯನ್ನು ಪ್ರಾರಂಭಿಸಿದ ವಿಜಯ್, ನಂತರ ಚೆನ್ನೈನ ವಿಲ್ಲಿವಾಕ್ಕಂ, ಅಣ್ಣಾ ನಗರ ಮತ್ತು ವಿರುಗಂಬಾಕ್ಕಂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು. ಈ ವೇಳೆ ವಿಲ್ಲಿವಾಕ್ಕಂನಲ್ಲಿ ಟಿವಿ ಕೆ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನ ಮತ್ತು ಟಿ ನಗರದಲ್ಲಿ ಎನ್ ಆನಂದ್ ಅವರು ವಿಜಯ್ ಅವರಿಗೆ ಸಾಥ್ ನೀಡಿದರು.
ವಿಶೇಷವೆಂದರೆ ಈ ಇಡೀ ಪ್ರಚಾರದ ಉದ್ದಕ್ಕೂ ವಿಜಯ್ ಅವರು ಎಲ್ಲಿಯೂ ಭಾಷಣ ಮಾಡಲಿಲ್ಲ. ಆದರೂ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಹಲವು ಅಭಿಮಾನಿಗಳು ತಮಗೆ ಪ್ರಿಯವಾದ ನಟನಿಗೆ ವಿವಿಧ ರೀತಿಯ ಉಡುಗೊರೆಗಳನ್ನು ನೀಡಿ ಪ್ರೀತಿ ವ್ಯಕ್ತಪಡಿಸಿದ್ದರು.

