
ವಿದ್ಯಾರ್ಥಿಗಳ ಪರ ನಿಂತ ಆರ್. ಮಾಧವನ್
ವಿದ್ಯಾರ್ಥಿಗಳ ಹೋರಾಟಕ್ಕೆ ಆರ್. ಮಾಧವನ್ ಬೆಂಬಲ; ಶಿಕ್ಷಣ ಸುಧಾರಣೆಗೆ ಆಗ್ರಹ
ಎಫ್‌ಟಿಐಐನಲ್ಲಿ 'ಗಾಯಬ್' ಟ್ರೋಲ್ ವೈರಲ್ ಆದ ಬಳಿಕ ಮೌನ ಮುರಿದ ಆರ್. ಮಾಧವನ್, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಇದೀಗ ನಟ ಆರ್. ಮಾಧವನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಬಳಿಕ ಪ್ರತಿಭಟನೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಮತ್ತೊಬ್ಬ ಬಾಲಿವುಡ್ ನಟರಾಗಿದ್ದಾರೆ.
ಇದಕ್ಕೂ ಮುನ್ನ, ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಅಧ್ಯಕ್ಷರಾಗಿರುವ ಮಾಧವನ್ ಅವರ ಕಚೇರಿ ಬಾಗಿಲಿನ ಹೊರಗೆ 'ಗಾಯಬ್' ಎಂಬ ಪೋಸ್ಟರ್ ಹಾಗೂ 'NEET For Sale' ಎಂಬ ಫಲಕ ಅಂಟಿಸಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರತಿಭಟನೆ ಕುರಿತು ಅವರು ಮೌನವಾಗಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಮಾಧವನ್, ಭಾರತದ ಯುವಜನರ ಸಾಮರ್ಥ್ಯದ ಮೇಲೆ ತಮಗೆ ಅಪಾರ ನಂಬಿಕೆ ಇದೆ ಎಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ವಿದ್ಯಾರ್ಥಿಗಳ ಪರಿಶ್ರಮ, ಕನಸು ಹಾಗೂ ಕುಟುಂಬಗಳ ನಿರೀಕ್ಷೆಗಳಿಗೆ ದೊಡ್ಡ ಹೊಡೆತ ನೀಡುತ್ತವೆ. ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಇಂತಹ ಅಕ್ರಮಗಳು ಕುಂದಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಪ್ರತಿಯೊಬ್ಬರ ವಿರುದ್ಧ ಸರ್ಕಾರ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಯಾರೂ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡದಂತೆ ಕಾನೂನು ಕ್ರಮಗಳು ಸ್ಪಷ್ಟ ಮತ್ತು ಕಠಿಣವಾಗಿರಬೇಕು ಎಂದು ಮಾಧವನ್ ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರ ಈಗಾಗಲೇ ಕೆಲವು ಲೋಪಗಳನ್ನು ಒಪ್ಪಿಕೊಂಡಿದ್ದು, ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಭವಿಷ್ಯದ ಪೀಳಿಗೆಗೆ ನ್ಯಾಯಸಮ್ಮತ ವ್ಯವಸ್ಥೆ ಕಲ್ಪಿಸುವ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ನೇರ ಸಂದೇಶ ನೀಡಿರುವ ಮಾಧವನ್, ಯಾವುದೇ ವ್ಯವಸ್ಥೆಯ ಲೋಪಕ್ಕಿಂತ ನಿಮ್ಮ ಪ್ರತಿಭೆ, ಪರಿಶ್ರಮ ಮತ್ತು ವ್ಯಕ್ತಿತ್ವ ದೊಡ್ಡದು. ತಾತ್ಕಾಲಿಕ ಹಿನ್ನಡೆ ನಿಮ್ಮ ಭವಿಷ್ಯವನ್ನು ನಿರ್ಧರಿಸದಂತೆ ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು ಎಂದು ಕರೆ ನೀಡಿದ್ದಾರೆ.
ಶಾಂತಿಯುತವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸುಧಾರಣೆಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಧೈರ್ಯ ಮತ್ತು ದೃಢನಿಶ್ಚಯವನ್ನು ಮೆಚ್ಚಿರುವ ಅವರು, ಈ ಹೋರಾಟವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಯತ್ನಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದೂ ಸಲಹೆ ನೀಡಿದ್ದಾರೆ.
ಈ ಮೊದಲು ಸಲ್ಮಾನ್ ಖಾನ್ ಕೂಡ ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಷಯವಾಗಿದ್ದು, ವಿದ್ಯಾರ್ಥಿಗಳ ಹೋರಾಟವನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ್ದರು. ಈಗಾಗಲೇ ನಾಸೀರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ದಿಯೋಲ್, ಸೋನಾಕ್ಷಿ ಸಿನ್ಹಾ ಹಾಗೂ ರಿತೇಶ್ ದೇಶಮುಖ್ ಸೇರಿದಂತೆ ಹಲವು ಸಿನಿತಾರೆಯರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

