ವೈಯಕ್ತಿಕ ಕಾರಣ, ಈ ಬಾರಿ ಬರ್ತ್‌ಡೇ ಸೆಲೆಬ್ರೇಷನ್ ಇಲ್ಲ: ಕಿಚ್ಚ ಸುದೀಪ್ ಪತ್ರ
x

ಈ ಬಾರಿ ಬರ್ತ್‌ಡೇ ಸೆಲೆಬ್ರೇಷನ್ ಇಲ್ಲ: ವೈಯಕ್ತಿಕ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

ವೈಯಕ್ತಿಕ ಕಾರಣ, ಈ ಬಾರಿ ಬರ್ತ್‌ಡೇ ಸೆಲೆಬ್ರೇಷನ್ ಇಲ್ಲ: ಕಿಚ್ಚ ಸುದೀಪ್ ಪತ್ರ

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ವೈಯಕ್ತಿಕ ಕಾರಣಗಳಿದ್ದು, ಅಭಿಮಾನಿಗಳ ಪ್ರೀತಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳೇ ತಮ್ಮ ಆಶೀರ್ವಾದ ಎಂದಿದ್ದಾರೆ.


Click the Play button to hear this message in audio format

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಪಯಣ ಪೂರ್ಣಗೊಳಿಸಿರುವ ನಟ ಕಿಚ್ಚ ಸುದೀಪ್, ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ಭಾವುಕ ಸಂದೇಶ ನೀಡಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬವಿದ್ದು, ಪ್ರತಿವರ್ಷ ಅಭಿಮಾನಿಗಳು ಅದನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ವೈಯಕ್ತಿಕ ಕಾರಣಗಳಿಂದಾಗಿ ಸಂಭ್ರಮದಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ಸುದೀಪ್ ತಿಳಿಸಿದ್ದಾರೆ.

30 ವರ್ಷಗಳ ಪ್ರೀತಿಗೆ ಸುದೀಪ್ ಧನ್ಯವಾದ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಕಿಚ್ಚ ಸುದೀಪ್‌, “ಸೆಪ್ಟೆಂಬರ್ 2 ಎಂಬುದು ಒಂದು ದಿನಾಂಕ ಅಷ್ಟೇ. ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು” ಎಂದು ಸುದೀಪ್ ಭಾವುಕರಾಗಿದ್ದಾರೆ. ಕಳೆದ 30 ವರ್ಷಗಳಲ್ಲಿ ತಮ್ಮ ಪ್ರತಿಯೊಂದು ಸಿನಿಮಾ, ಬಿಗ್‌ಬಾಸ್ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಅಭಿಮಾನಿಗಳು ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವೇ ತಮ್ಮ ಶ್ರೀರಕ್ಷೆ ಎಂದು ಹೇಳಿದ್ದಾರೆ.

ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ವೈಯಕ್ತಿಕ ಕಾರಣಗಳಿವೆ ಎಂದು ಸ್ಪಷ್ಟಪಡಿಸಿರುವ ಸುದೀಪ್, “ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಸೆಪ್ಟೆಂಬರ್ 2ರಂದು ಮನೆಯ ಬಳಿಯೂ ಯಾರಿಗೂ ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದು, ಸತ್ಕಾರಗಳು ಗದ್ದಲವಾಗದಂತೆ ಹಲವು ಬಾರಿ ಮನವಿ ಮಾಡಿದ್ದೇನೆ ಎಂದಿದ್ದಾರೆ. ಅಭಿಮಾನಿಗಳು ನೀಡುವ ಉಡುಗೊರೆಗಳನ್ನು ಸಮಾಜಕ್ಕೆ ಸದ್ವಿನಿಯೋಗ ಮಾಡುವಂತೆ ಮನವಿ ಮಾಡಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಈ ಬಾರಿ ಹುಟ್ಟುಹಬ್ಬದ ಸಂಭ್ರಮವಿಲ್ಲ

ತಮ್ಮ ಸಿನಿಮಾ ಪಯಣದ ಬಗ್ಗೆಯೂ ಸುದೀಪ್ ಮಾತನಾಡಿದ್ದು, ಸಿನಿಮಾ ತಮ್ಮ ಪರಮ ಕಾಯಕ ಎಂಬುದನ್ನು ಮತ್ತೊಮ್ಮೆ ಹೇಳಿದ್ದಾರೆ. ಕೆಲವೊಮ್ಮೆ ಸಿನಿಮಾಗಳು ತಡವಾಗಬಹುದು, ಅದಕ್ಕೂ ಕಾರಣಗಳಿರುತ್ತವೆ ಎಂದು ಹೇಳಿರುವ ಅವರು, “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿಯಾಗುತ್ತಿದೆ ಎಂದರ್ಥ” ಎಂಬ ತಮ್ಮದೇ ಸಿನಿಮಾದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.

ಯಾವುದೇ ವೇದಿಕೆಯಾಗಲಿ, ಕಾರ್ಯಕ್ರಮವಾಗಲಿ ಕನ್ನಡಿಗರನ್ನು ರಂಜಿಸುವ ಮತ್ತು ಕನ್ನಡವನ್ನು ಸಂಭ್ರಮಿಸುವ ವಿಷಯದಲ್ಲಿ ತಾನು ಎಂದಿಗೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗುವುದಿಲ್ಲ ಎಂದು ಸುದೀಪ್ ಹೇಳಿದ್ದಾರೆ. ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಅಭಿಮಾನಿಗಳು ಹೆಜ್ಜೆ ಗುರುತಾಗಿ ಇದ್ದಾರೆ ಎಂದು ಹೇಳಿರುವ ಅವರು, “ಜೀವನದಲ್ಲಿ ಹೂ ಮುಳ್ಳು, ನಿಮ್ಮ ಪ್ರೀತಿ ಮೈಲಿಗಲ್ಲು. ಲವ್ ಯೂ ಆಲ್ವೇಸ್” ಎಂದು ಭಾವುಕವಾಗಿ ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.

ಉಡುಗೊರೆಗಳ ಬದಲು ಸಮಾಜಮುಖಿ ಕಾರ್ಯಕ್ಕೆ ಮನವಿ

ಹುಟ್ಟುಹಬ್ಬದಂದು ಅದ್ಧೂರಿ ಆಚರಣೆಗೆ ಬದಲಾಗಿ ತಮ್ಮ ಊರು, ಭಾಗಗಳಲ್ಲಿ ಅಭಿಮಾನಿಗಳು ನಡೆಸುವ ಸಮಾಜಮುಖಿ ಕಾರ್ಯಕ್ರಮಗಳೇ ತಮಗೆ ಆಶೀರ್ವಾದ ಎಂದು ಸುದೀಪ್ ಹೇಳಿದ್ದಾರೆ. “ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?” ಎಂದು ಪ್ರಶ್ನಿಸುವ ಮೂಲಕ ಅಭಿಮಾನಿಗಳೊಂದಿಗಿನ ತಮ್ಮ ಭಾವನಾತ್ಮಕ ನಂಟನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.

Read More
Next Story