
ಕೇರಳದ ಕಜಿಯಾ ಲಿಜ್ ಮೆಜೋ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಗೆದ್ದಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಮುಡಿಗೇರಿಸಿಕೊಂಡ ಕೇರಳದ ಕಜಿಯಾ ಲಿಜ್ ಮೆಜೋ
ಕೇರಳದ ಕಜಿಯಾ ಲಿಜ್ ಮೆಜೋ ನವೆಂಬರ್ನಲ್ಲಿ ಪ್ಯುರ್ಟೊ ರಿಕೊದಲ್ಲಿ ನಡೆಯುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
ಜೈಪುರದಲ್ಲಿ ಭಾನುವಾರ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2026ರ ಗ್ರ್ಯಾಂಡ್ ಫಿನಾಲೆಯಲ್ಲಿ ಕೇರಳದ ಕಜಿಯಾ ಲಿಜ್ ಮೆಜೋ ವಿಜೇತರಾಗಿ ಹೊರಹೊಮ್ಮಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾಗಿದ್ದ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಕಜಿಯಾ ರಾಷ್ಟ್ರೀಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ ನವೆಂಬರ್ನಲ್ಲಿ ಪ್ಯುರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವೈಷ್ಣವಿ ಗಣೇಶ್ಗೆ ಮೊದಲ ರನ್ನರ್ ಅಪ್ ಪಟ್ಟ
ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಅವರಿಗೆ ಮಿಸ್ ಇಂಟರ್ನ್ಯಾಷನಲ್ ಇಂಡಿಯಾ 2026 ಕಿರೀಟವೂ ಲಭಿಸಿದೆ. ಗುಜರಾತ್ನ ಅನುಶ್ರೀ ಸಾತವ್ಲೇಕರ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಈ ವರ್ಷದ ಸ್ಪರ್ಧೆಯ ಅಂತಿಮ ಸುತ್ತಿನ ತೀರ್ಪುಗಾರರ ಮಂಡಳಿಗೆ 1994ರಲ್ಲಿ ಭಾರತಕ್ಕೆ ಮೊದಲ ಮಿಸ್ ಯೂನಿವರ್ಸ್ ಕಿರೀಟ ತಂದುಕೊಟ್ಟ ಸುಷ್ಮಿತಾ ಸೇನ್ ನೇತೃತ್ವ ವಹಿಸಿದ್ದರು. ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ವಿಜೇತರಾದ ಸೆಲಿನಾ ಜೇಟ್ಲಿ ಮತ್ತು ಊರ್ವಶಿ ರೌಟೇಲಾ ಕೂಡ ತೀರ್ಪುಗಾರರಾಗಿ ಭಾಗವಹಿಸಿದ್ದರು.
8 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಆಯ್ಕೆ
2026ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಗೆ ಸುಮಾರು 8,000ರಿಂದ 9,000 ಮಂದಿ ಆಕಾಂಕ್ಷಿಗಳು ಪ್ರಾಥಮಿಕ ಹಂತದಲ್ಲಿ ಪರಿಗಣಿಸಲ್ಪಟ್ಟಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳು, ಅಂತಿಮ ಆಡಿಷನ್ಗಳು, ವೈಲ್ಡ್ಕಾರ್ಡ್ ಪ್ರವೇಶ ಹಾಗೂ ಎನ್ಆರ್ಐ ವಿಭಾಗದ ಮೂಲಕ ಅಂತಿಮ 52 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು.
ಅಂತಿಮ ಸ್ಪರ್ಧಿಗಳು ಸ್ಯಾಶಿಂಗ್ ಸಮಾರಂಭ, ಪರಿಚಯ ಮತ್ತು ಭಾಷಣ ಸುತ್ತು, ಗಾಲಾ ಕಾರ್ಯಕ್ರಮ ಹಾಗೂ ಸ್ವಿಮ್ಸೂಟ್ ಸ್ಪರ್ಧೆ ಸೇರಿದಂತೆ ಹಲವು ಹಂತಗಳಲ್ಲಿ ಭಾಗವಹಿಸಿದ್ದರು.
ನವೆಂಬರ್ನಲ್ಲಿ ಜಾಗತಿಕ ವೇದಿಕೆಯಲ್ಲಿ ಕಜಿಯಾ
ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯು ಮಿಸ್ ಯೂನಿವರ್ಸ್ ಜಾಗತಿಕ ಸ್ಪರ್ಧೆಗೆ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡುವ ರಾಷ್ಟ್ರೀಯ ಸ್ಪರ್ಧೆಯಾಗಿದೆ. 2024ರಿಂದ ಗ್ಲಾಮನಂದ್ ಗ್ರೂಪ್ ಭಾರತದಲ್ಲಿನ ಈ ಸ್ಪರ್ಧೆಯ ಫ್ರಾಂಚೈಸಿಯನ್ನು ಆಯೋಜಿಸುತ್ತಿದೆ. 2024ರಲ್ಲಿ ರಿಯಾ ಸಿಂಘಾ ಹಾಗೂ 2025ರಲ್ಲಿ ಮಾನಿಕಾ ವಿಶ್ವಕರ್ಮ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದಿದ್ದರು. ಇದೀಗ ಕಜಿಯಾ ಲಿಜ್ ಮೆಜೋ ಭಾರತವನ್ನು ಪ್ರತಿನಿಧಿಸುವ ಜವಾಬ್ದಾರಿ ಹೊತ್ತಿದ್ದಾರೆ.
ನವೆಂಬರ್ನಲ್ಲಿ ಪ್ಯುರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಮುನ್ನ ಕಜಿಯಾ ತರಬೇತಿ ಮತ್ತು ಗ್ರೂಮಿಂಗ್ ಮೂಲಕ ಸಜ್ಜಾಗಲಿದ್ದಾರೆ. ಜಾಗತಿಕ ವೇದಿಕೆಯಲ್ಲಿ ವಿವಿಧ ದೇಶಗಳ ಸ್ಪರ್ಧಿಗಳೊಂದಿಗೆ ಅವರು ಮಿಸ್ ಯೂನಿವರ್ಸ್ ಕಿರೀಟಕ್ಕಾಗಿ ಸ್ಪರ್ಧಿಸಲಿದ್ದಾರೆ.

