ಕರಾವಳಿ ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ಧ್ವನಿ ಎತ್ತಿದ ಮೇಘನಾ ರಾಜ್ ಸರ್ಜಾ
x

ಸ್ಯಾಂಡಲ್​ವುಡ್​ನಲ್ಲಿ ಸದ್ಯ ತೀವ್ರ ಕುತೂಹಲ ಮೂಡಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವಾಗಲೇ ದೊಡ್ಡ ವಿವಾದಕ್ಕೆ ಸಿಲುಕಿದೆ.

'ಕರಾವಳಿ' ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ಧ್ವನಿ ಎತ್ತಿದ ಮೇಘನಾ ರಾಜ್ ಸರ್ಜಾ

ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ನಡುವಿನ 'ಕರಾವಳಿ' ಚಿತ್ರದ ಡಬ್ಬಿಂಗ್ ಮತ್ತು ಸಂಭಾವನೆ ವಿವಾದ ಸ್ಯಾಂಡಲ್​ವುಡ್​ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪ್ರಜ್ವಲ್ ಅವರ ಬೆಂಬಲಕ್ಕೆ ನಟಿ ಮೇಘನಾ ರಾಜ್ ಸರ್ಜಾ ನಿಂತಿದ್ದಾರೆ.


Click the Play button to hear this message in audio format

ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಟ ಪ್ರಜ್ವಲ್ ದೇವರಾಜ್ ನಡುವಿನ ಮನಸ್ತಾಪದಿಂದಾಗಿ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿರುವ 'ಕರಾವಳಿ' ಚಿತ್ರದ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಿತ್ರದ ಬಿಡುಗಡೆ ಹೊತ್ತಿಗೇ ತಲೆದೋರಿರುವ ಈ ಸಂಭಾವನೆ ಕಿರಿಕ್ ಹಾಗೂ ಡಬ್ಬಿಂಗ್ ವಿವಾದದಲ್ಲಿ ಚಿತ್ರರಂಗದ ಹಲವರು ಪ್ರಜ್ವಲ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಇತ್ತೀಚೆಗಷ್ಟೇ ಪನ್ನಗಾಭರಣ ಅವರು ಪ್ರಜ್ವಲ್ ಬೆಂಬಲಕ್ಕೆ ನಿಂತ ಬೆನ್ನಲ್ಲೇ, ಈಗ ನಟಿ ಮೇಘನಾ ರಾಜ್ ಸರ್ಜಾ ಕೂಡ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಬಾಲ್ಯದ ಗೆಳೆಯನ ಪರವಾಗಿ ಧ್ವನಿ ಎತ್ತಿದ್ದಾರೆ.

ಚಿತ್ರತಂಡ ಮತ್ತು ನಟನ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ಅವರ ವೃತ್ತಿಪರತೆ ಮತ್ತು ಸಭ್ಯತೆಯನ್ನು ಕೊಂಡಾಡಿದ್ದಾರೆ. ತಮಗೆ ನಾಲ್ಕೈದು ವರ್ಷ ವಯಸ್ಸಿದ್ದಾಗಿನಿಂದಲೂ ಪ್ರಜ್ವಲ್ ಅವರನ್ನು ಹತ್ತಿರದಿಂದ ಬಲ್ಲೆ ಎಂದಿರುವ ನಟಿ, ಇಷ್ಟು ವರ್ಷಗಳ ಸುದೀರ್ಘ ಜರ್ನಿಯಲ್ಲಿ ಅವರು ಎಂದಿಗೂ ಅನಗತ್ಯ ವಿವಾದಗಳಿಗೆ ತಲೆ ಹಾಕಿಲ್ಲ ಮತ್ತು ಸದಾ ಇತರರಿಗೆ ಸಹಾಯ ಮಾಡಲು ಮುಂದಾಗುವ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವೈಯಕ್ತಿಕ ಸ್ನೇಹದ ಜೊತೆಗೆ ಪ್ರಜ್ವಲ್ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡಿರುವ ಮೇಘನಾ, ಅವರ ಕೆಲಸದ ಬದ್ಧತೆ ಮತ್ತು ಶಿಸ್ತನ್ನು ಶ್ಲಾಘಿಸಿದ್ದಾರೆ. ಚಲನಚಿತ್ರ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದು, ಚಿತ್ರರಂಗದ ಕಷ್ಟನಷ್ಟಗಳನ್ನು ಹತ್ತಿರದಿಂದ ನೋಡಿರುವ ಹಾಗೂ ಸ್ವತಃ ನಿರ್ಮಾಪಕರೂ ಆಗಿರುವ ಪ್ರಜ್ವಲ್ ಅವರ ಬಗ್ಗೆ ಈಗ ಕೇಳಿಬರುತ್ತಿರುವ ಮಾತುಗಳು ತಮಗೆ ತೀವ್ರ ಬೇಸರ ತಂದಿವೆ ಎಂದು ಅವರು ಹೇಳಿದ್ದಾರೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಅವರ ಹೆಸರಿಗೆ ಇಲ್ಲದ ಕಪ್ಪು ಚುಕ್ಕೆ ಈಗ ಏಕಾಏಕಿ ಏಕೆ ಬರಬೇಕು ಎಂಬ ಪ್ರಶ್ನೆ ಇಡೀ ಆಪ್ತ ವಲಯವನ್ನು ಕಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ಯಾರೋ ಹೇಳುವ ಮಾತುಗಳನ್ನು ನಂಬದೆ ಪ್ರಜ್ವಲ್ ಅವರ ಮೇಲಿರುವ ವಿಶ್ವಾಸವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿರುವ ಮೇಘನಾ ರಾಜ್, ಪ್ರಜ್ವಲ್ ಅವರಿಗೆ 'ಕರಾವಳಿ' ಸಿನಿಮಾದ ಬಗ್ಗೆ ಅಪಾರ ಹೆಮ್ಮೆ ಮತ್ತು ಪ್ರೀತಿ ಇದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಈ ಚಿತ್ರದ ಕಥೆ ಕೇಳಿದ ಆರಂಭದ ದಿನದಿಂದಲೂ ಪ್ರಜ್ವಲ್ ಅತ್ಯಂತ ಉತ್ಸುಕರಾಗಿದ್ದರು ಮತ್ತು ತಮ್ಮ ವೃತ್ತಿಜೀವನಕ್ಕೆ ಇದೊಂದು ಪ್ರಮುಖ ಪಾತ್ರ ಎಂದು ಹೇಳಿದ್ದರು. ಅಂದು ಕಥೆ ಕೇಳಿದಾಗ ಇದ್ದಷ್ಟೇ ಅಭಿಮಾನ ಇಂದಿಗೂ ಅವರಿಗೆ ಚಿತ್ರದ ಮೇಲಿದೆ ಎಂದು ತಿಳಿಸಿರುವ ಮೇಘನಾ, ಕನ್ನಡ ಕಲಾಭಿಮಾನಿಗಳು ಎಂದಿನಂತೆ ಪ್ರಜ್ವಲ್ ದೇವರಾಜ್ ಬೆಂಬಲಕ್ಕೆ ನಿಲ್ಲಬೇಕು ಎಂದು ವಿನಂತಿಸಿದ್ದಾರೆ.

Read More
Next Story