
ಕರಾವಳಿ ಸಿನಿಮಾ ವಿವಾದ
ಕರಾವಳಿ ಚಿತ್ರದ ವಿವಾದ ಪೊಲೀಸ್ ಠಾಣೆಗೆ: ನಟ ಪ್ರಜ್ವಲ್ ದೇವರಾಜ್ ಆಪ್ತರ ವಿರುದ್ಧ FIR
ಕರಾವಳಿ ಚಿತ್ರದ ಟ್ರೇಲರ್ ಲಾಂಚ್ ವೇಳೆ ನಿರ್ದೇಶಕರಿಗೆ ನಿಂದಿಸಿ ಗಲಾಟೆ ಮಾಡಿದ ಆರೋಪದಡಿ ನಟ ಪ್ರಜ್ವಲ್ ದೇವರಾಜ್ ಆಪ್ತರ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ 'ಕರಾವಳಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಟ್ರೇಲರ್ ಲಾಂಚ್ ವೇಳೆ ಚಿತ್ರತಂಡದ ವಿರುದ್ಧ ರಂಪಾಟ ನಡೆಸಿ, ನಿರ್ದೇಶಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಆಪ್ತರ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಡಬ್ಬಿಂಗ್ ವಿಚಾರವಾಗಿ ಶುರುವಾದ ಗದ್ದಲ
ಕಳೆದ ಜುಲೈ 7ರಂದು ಗಾಂಧಿನಗರದ ಎಸ್.ಸಿ. ರಸ್ತೆಯಲ್ಲಿರುವ ಕಪಾಲಿ ಮಾಲ್‌ನಲ್ಲಿ 'ಕರಾವಳಿ' ಚಿತ್ರದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ದಿಲೀಪ್, ಅವಿನಾಶ್ ಹಾಗೂ ನಂದಕುಮಾರ್ ಎಂಬುವವರು, ಚಿತ್ರದ ಟ್ರೇಲರ್‌ನಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಮೂಲ ಧ್ವನಿಯನ್ನು ಬಳಸದೆ ಬೇರೆ ಧ್ವನಿಯಿಂದ ಡಬ್ ಮಾಡಿಸಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದ್ದರು. ಆರಂಭದಲ್ಲಿ ಇವರು ಪ್ರಜ್ವಲ್ ಅವರ ಅಭಿಮಾನಿಗಳು ಎಂದು ಭಾವಿಸಲಾಗಿತ್ತಾದರೂ, ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅವರು ತೀವ್ರ ಬೇಸರ ವ್ಯಕ್ತಪಡಿಸಿ ಇವರು ಕೇವಲ ಅಭಿಮಾನಿಗಳಲ್ಲ, ಬದಲಿಗೆ ನಟನ ಆಪ್ತರಾಗಿದ್ದು ಉದ್ದೇಶಪೂರ್ವಕವಾಗಿಯೇ ಬಂದು ಕಾರ್ಯಕ್ರಮದಲ್ಲಿ ರಂಪಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೂವರ ವಿರುದ್ಧ ಕಾನೂನು ಕ್ರಮ
ಈ ಘಟನೆಗೆ ಸಂಬಂಧಿಸಿದಂತೆ ಗುರುದತ್ ಗಾಣಿಗ ಫಿಲ್ಮ್ಸ್‌ನ ಕಾರ್ಯನಿರ್ವಾಹಕರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ದೂರಿನನ್ವಯ ದಿಲೀಪ್, ಅವಿನಾಶ್ ಹಾಗೂ ನಂದಕುಮಾರ್ ಎಂಬ ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆ 352, 292 ಮತ್ತು 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಮಾಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಡಿಯೋ ಆಧರಿಸಿ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

