
ಕಂಗನಾ, ಸ್ಮೃತಿ ಇರಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತು ರಾಖಿ ಮಾಡಿದ್ದ ಹೇಳಿಕೆಗಳು ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದ್ದವು.
ರಾಖಿ ಸಾವಂತ್ ಸ್ವೀಪರ್ ಕೆಲಸ ಪಡೆಯುವುದಕ್ಕೂ ಅರ್ಹರಲ್ಲ ಎಂದ ಕಂಗನಾ
ಕಂಗನಾ ಮತ್ತು ರಾಖಿ ನಡುವೆ ಈ ಹಿಂದೆ ಕೂಡ ಹಲವು ಬಾರಿ ಸಾರ್ವಜನಿಕವಾಗಿ ವಾಕ್ಸಮರ ನಡೆದಿತ್ತು. ದೆಹಲಿಯಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ ಪ್ರತಿಭಟನೆ ಕುರಿತು ಕಂಗನಾ ನೀಡಿದ್ದ ಹೇಳಿಕೆಯನ್ನು ರಾಖಿ ಟೀಕಿಸಿದ್ದರು.
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತು ನಟಿ ರಾಖಿ ಸಾವಂತ್ ನಡುವಿನ ವಾಕ್ಸಮರ ಮತ್ತೆ ತೀವ್ರಗೊಂಡಿದೆ. ಇತ್ತೀಚೆಗೆ ಕಂಗನಾ ರಣಾವತ್, ನಟಿ-ರಾಜಕಾರಣಿ ಸ್ಮೃತಿ ಇರಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ರಾಖಿ ಸಾವಂತ್ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅತ್ಯಂತ ಕಟುವಾಗಿ ತಿರುಗೇಟು ನೀಡಿದ್ದಾರೆ.
ಯಶಸ್ವಿ ಮಹಿಳೆಯರ ವಿರುದ್ಧ ಅಸೂಯೆ ಮತ್ತು ಸ್ವಂತ ವೈಫಲ್ಯಗಳನ್ನು ಮುಚ್ಚಿಡಲು ಕೆಲವರು ಈ ರೀತಿ ವೈಯಕ್ತಿಕ ಹಾಗೂ ಚಾರಿತ್ರ್ಯ ವಧೆ ಮಾಡುವ ಆರೋಪಗಳನ್ನು ಮಾಡುತ್ತಾರೆ ಎಂದು ಕಂಗನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಉದ್ದೇಶಪೂರ್ವಕ ಹಾಗೂ ಪದೇ ಪದೆ ನಡೆಯುವ ದಾಳಿಗಳಿಗೆ ಸದಾ ಸ್ಪಷ್ಟನೆ ನೀಡುವುದನ್ನು ಮತ್ತು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ರಾಖಿ ಸಾವಂತ್ ಅವರನ್ನು ನೇರವಾಗಿ ಗುರಿಯಾಗಿಸಿ ಟೀಕಿಸಿರುವ ಕಂಗನಾ, ಯಶಸ್ಸಿಗಾಗಿ ಅವರು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಕೊನೆಗೆ ಒಂದು ಸ್ವೀಪರ್ ಕೆಲಸವನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸ್ವೀಪರ್ ಕೆಲಸಕ್ಕೂ ಕೂಡ ತನ್ನದೇ ಆದ ಕೌಶಲ ಮತ್ತು ಪ್ರತಿಭೆ ಬೇಕಾಗುತ್ತದೆ, ಹೀಗಾಗಿ ಯಾವ ಉಪಕಾರಗಳಿಂದಲೂ ನಿಮಗೇನೂ ಸಿಗುವುದಿಲ್ಲ, ಸುಮ್ಮನೆ ಕುಳಿತು ನನ್ನ ರೀಲ್ಸ್ ನೋಡಿ ಅಳುತ್ತಿರಿ ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಂಗನಾ ಮತ್ತು ರಾಖಿ ನಡುವೆ ಈ ಹಿಂದೆ ಕೂಡ ಸಾರ್ವಜನಿಕವಾಗಿ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು. ದೆಹಲಿಯಲ್ಲಿ ನಡೆದ ಪ್ರತಿಭಟನೆಯೊಂದರ ಕುರಿತು ಕಂಗನಾ ನೀಡಿದ್ದ ಹೇಳಿಕೆಯನ್ನು ರಾಖಿ ಕಟುವಾಗಿ ಟೀಕಿಸಿದ್ದರು. ಇದಲ್ಲದೆ, ಈ ಹಿಂದೆ ತಮ್ಮನ್ನು ಟೀಕಿಸಿದ್ದ ಆಶುತೋಷ್ ರಾಣಾ, ಸೋನು ಸೂದ್ ಹಾಗೂ ತಾಪ್ಸಿ ಪನ್ನು ಮುಂತಾದ ಬಾಲಿವುಡ್ ಗಣ್ಯರಿಗೂ ಕಂಗನಾ ತಿರುಗೇಟು ನೀಡಿದ್ದರು. ತಮ್ಮ ಯಶಸ್ಸಿನ ಶೇಕಡಾ ಒಂದರಷ್ಟನ್ನೂ ಸಾಧಿಸದವರ ಅಭಿಪ್ರಾಯಗಳಿಗೆ ತಾವು ಎಂದಿಗೂ ಬೆಲೆ ನೀಡುವುದಿಲ್ಲ ಎಂದು ಕಂಗನಾ ಸ್ಪಷ್ಟಪಡಿಸಿದ್ದರು

