
ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಕೇವಲ ನಟನೆಯಷ್ಟೇ ಮಾಡದೆ ತೆರೆಮರೆಯಲ್ಲೂ ಸಕ್ರಿಯವಾಗಿ ಶ್ರಮಿಸಿದ್ದಾರೆ ಎಂದು ನಿರ್ದೇಶಕ ಬುಚ್ಚಿ ಬಾಬು ಸನಾ ಪ್ರಶಂಸಿಸಿದ್ದಾರೆ.
Peddi| ಪೆದ್ದಿ ಚಿತ್ರದಲ್ಲಿ ಜಾನ್ವಿ ಕಪೂರ್ ನಟನೆಗೆ ಬುಚ್ಚಿ ಬಾಬು ಸನಾ ಪ್ರಶಂಸೆ
ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಕೇವಲ ನಟಿಸಿಲ್ಲ, ತೆರೆಮರೆಯಲ್ಲೂ ಹತ್ತು ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ನಿರ್ದೇಶಕ ಬುಚ್ಚಿ ಬಾಬು ಹೊಗಳಿದ್ದಾರೆ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ, ಬಹುನಿರೀಕ್ಷಿತ 'ಪೆದ್ದಿ' ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸಿದ್ದು, ಚಿತ್ರೀಕರಣದ ಸೆಟ್‌ಗಳಲ್ಲಿ ಅವರ ಸಮರ್ಪಣಾ ಭಾವದ ಬಗ್ಗೆ ನಿರ್ದೇಶಕ ಬುಚ್ಚಿ ಬಾಬು ಸನಾ ಭರಪೂರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಜಾನ್ವಿ ಕೇವಲ ಒಬ್ಬ ನಟಿಯಾಗಿ ಮಾತ್ರವಲ್ಲದೆ, ತೆರೆಮರೆಯಲ್ಲೂ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ ಎಂದು ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಬುಚ್ಚಿ ಬಾಬು ಸನಾ, ಜಾನ್ವಿ ಕಪೂರ್ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ನಟಿ ಎಂದು ಕೊಂಡಾಡಿದ್ದಾರೆ. ಈ ಸಿನಿಮಾದಲ್ಲಿ ಅವರು 'ಅಚ್ಚಿಯಮ್ಮ' ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅವರು ಕೇವಲ ನಾಯಕಿಯಾಗಿ ಉಳಿಯದೆ, ಸಹ ನಿರ್ದೇಶಕಿ, ಮ್ಯಾನೇಜರ್, ಪ್ರೊಡಕ್ಷನ್ ಡಿಸೈನರ್ ಹಾಗೂ ಕಾಸ್ಟ್ಯೂಮ್ ಡಿಸೈನರ್ ತರಹ ಎಲ್ಲಾ ವಿಭಾಗಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಾತ್ರಕ್ಕೆ ಹೆಚ್ಚು ನೈಜತೆ ತರಲು ಅವರು ವಸ್ತ್ರವಿನ್ಯಾಸ ಮತ್ತು ದೃಶ್ಯಗಳ ಸಂಯೋಜನೆಯಲ್ಲಿ ಹಲವಾರು ಉತ್ತಮ ಐಡಿಯಾಗಳನ್ನು ನೀಡುತ್ತಿದ್ದರು ಎಂದು ಬುಚ್ಚಿ ಬಾಬು ತಿಳಿಸಿದ್ದಾರೆ.
ಇದೇ ವೇಳೆ ಚಿತ್ರದ ಕಾಸ್ಟಿಂಗ್ ಕುರಿತು ಆಸಕ್ತಿದಾಯಕ ವಿಷಯವೊಂದನ್ನು ಹಂಚಿಕೊಂಡ ನಿರ್ದೇಶಕರು, ಚಿತ್ರದ 'ಅಚ್ಚಿಯಮ್ಮ' ಪಾತ್ರಕ್ಕಾಗಿ ತಾನು ಮೊದಲು ಜಾನ್ವಿ ಕಪೂರ್ ಅವರ ತಂಗಿ ಖುಷಿ ಕಪೂರ್ ಅವರನ್ನು ಭೇಟಿಯಾಗಿದ್ದಾಗಿ ಹೇಳಿದ್ದಾರೆ. ಆದರೆ, ಖುಷಿ ಅವರನ್ನು ಪ್ರತ್ಯಕ್ಷವಾಗಿ ನೋಡಿದಾಗ ಈ ಪಾತ್ರಕ್ಕೆ ಅವರು ತುಂಬಾ ಚಿಕ್ಕ ವಯಸ್ಸಿನವರಾಗಿ ಕಾಣುತ್ತಾರೆ ಎನಿಸಿತು. ಒಂದೇ ಮನೆಯಲ್ಲಿ ತಂಗಿಯನ್ನು ಬೇಡ ಎಂದು ಅಕ್ಕನಿಗೆ ಕಥೆ ಹೇಳುವುದು ತಮಗೆ ಆರಂಭದಲ್ಲಿ ಮುಜುಗರ ತಂದಿತ್ತು. ಆದರೆ ಚಿತ್ರದ ಹಿತದೃಷ್ಟಿಯಿಂದ ಖುಷಿ ಅವರಿಗೆ ನೇರವಾಗಿಯೇ ಈ ಪಾತ್ರಕ್ಕೆ ನಿಮ್ಮ ಅಕ್ಕನೇ ಸೂಕ್ತ ಎಂದು ಹೇಳಿದ್ದಾಗಿ ಬುಚ್ಚಿ ಬಾಬು ನೆನಪಿಸಿಕೊಂಡಿದ್ದಾರೆ.
1980ರ ದಶಕದ ಆಂಧ್ರಪ್ರದೇಶದ ಗ್ರಾಮೀಣ ಹಿನ್ನೆಲೆಯ ಕಥಾಹಂದರ ಹೊಂದಿರುವ 'ಪೆದ್ದಿ' ಚಿತ್ರದಲ್ಲಿ ಕ್ರಿಕೆಟ್ ಮತ್ತು ಸಾಂಪ್ರದಾಯಿಕ ಕುಸ್ತಿ ಮುಖ್ಯ ಭಾಗಗಳಾಗಿವೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಬಿಗ್ ಬಜೆಟ್ ಕ್ರೀಡಾ ಆಧಾರಿತ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಜೊತೆಗೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಜಗಪತಿ ಬಾಬು ಹಾಗೂ ದಿವ್ಯೇಂದು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನವಿದ್ದು, ಜೂನ್4 ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

