
'96' ಸಿನಿಮಾದಲ್ಲೇ ಎಸ್. ಜಾನಕಿಯ ಕೊನೆಯ ನಟನೆ.
ಗಾಯಕಿಯಾಗಿ ಮಾತ್ರವಲ್ಲ, ನಟಿಯಾಗಿಯೂ ಮಿಂಚಿದ ಎಸ್. ಜಾನಕಿ
ಗಾನಕೋಗಿಲೆ ಎಸ್. ಜಾನಕಿ ಅವರ ಕೊನೆಯ ನಟನಾ ಕಾಣಿಕೆ '96' ಚಿತ್ರದಲ್ಲಿತ್ತು. ಥಿಯೇಟರ್‌ನಲ್ಲಿ ಕಟ್ ಆದ ದೃಶ್ಯ ಬಳಿಕ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆ ಪಡೆದಿತ್ತು.
ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ಅಗಲಿಕೆ ಭಾರತೀಯ ಚಿತ್ರರಂಗ ಹಾಗೂ ಸಂಗೀತ ಲೋಕವನ್ನು ದುಃಖದಲ್ಲಿ ಮುಳುಗಿಸಿದೆ. ಆರು ದಶಕಗಳಿಗೂ ಹೆಚ್ಚು ಕಾಲ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿಯಮ್ಮ, ಗಾಯಕಿಯಾಗಿ ಮಾತ್ರವಲ್ಲದೆ ಕೆಲ ಸಿನಿಮಾಗಳಲ್ಲಿ ವಿಶೇಷ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಅವರ ಕೊನೆಯ ನಟನೆ ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯದ ಸೂಪರ್ ಹಿಟ್ ತಮಿಳು ಚಿತ್ರ'96'ನಲ್ಲಿ ದಾಖಲಾಗಿತ್ತು.
ನಿರ್ದೇಶಕ ಸಿ. ಪ್ರೇಮ್ ಕುಮಾರ್ ಅವರ '96' ಚಿತ್ರದಲ್ಲಿ ಎಸ್. ಜಾನಕಿ ಅವರು ತಮ್ಮದೇ ಪಾತ್ರದಲ್ಲಿ ವಿಶೇಷ ಅತಿಥಿ ಪಾತ್ರ ನಿರ್ವಹಿಸಿದ್ದರು. ಸುಮಾರು ನಾಲ್ಕು ನಿಮಿಷಗಳ ಈ ದೃಶ್ಯದಲ್ಲಿ ರಾಮ್ (ವಿಜಯ್ ಸೇತುಪತಿ) ಮತ್ತು ಜಾನು (ತ್ರಿಷಾ) ಮಧ್ಯರಾತ್ರಿ ವೇಳೆ ಜಾನಕಿಯಮ್ಮನ ನಿವಾಸದ ಬಳಿ ಫೋಟೋ ತೆಗೆಯಲು ತೆರಳುತ್ತಾರೆ. ಆಗ ಅಲ್ಲಿಗೆ ಕಾರಿನಲ್ಲಿ ಆಗಮಿಸುವ ಜಾನಕಿಯಮ್ಮ ಅವರನ್ನು ಮನೆಯೊಳಗೆ ಆಹ್ವಾನಿಸಿ ಆತ್ಮೀಯವಾಗಿ ಮಾತನಾಡುವ ಭಾವನಾತ್ಮಕ ಕ್ಷಣಗಳು ಮೂಡಿಬರುತ್ತವೆ. ಇದೇ ಅವರ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಕೊನೆಯ ಅಭಿನಯವಾಗಿತ್ತು.
ಚಿತ್ರದಲ್ಲಿ ತ್ರಿಷಾ ಅಭಿನಯಿಸಿದ ಪಾತ್ರದ ಹೆಸರು ಜಾನಕಿ ದೇವಿ (ಜಾನು) ಆಗಿದ್ದು, ಆ ಪಾತ್ರ ಎಸ್. ಜಾನಕಿ ಅವರ ಅಪಾರ ಅಭಿಮಾನಿಯಾಗಿ ಚಿತ್ರಿಸಲ್ಪಟ್ಟಿದೆ. ಜಾನು ಕೇವಲ ಜಾನಕಿಯಮ್ಮನ ಹಾಡುಗಳನ್ನೇ ಹಾಡುವ ಗಾಯಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಈ ವಿಶೇಷ ದೃಶ್ಯದಲ್ಲಿ ಜಾನಕಿಯಮ್ಮ, ಒಬ್ಬ ಕಲಾವಿದನ ಹಾಡುಗಳಿಗೆ ಮಾತ್ರ ಸೀಮಿತವಾಗದೆ ಎಲ್ಲ ರೀತಿಯ ಸಂಗೀತವನ್ನು ಹಾಡಿ ಪ್ರತಿಭೆಯನ್ನು ಬೆಳೆಸಿಕೊಳ್ಳುವಂತೆ ಜಾನುವಿಗೆ ಸಲಹೆ ನೀಡುವ ಸಂಭಾಷಣೆ ಇದೆ.
ಆದರೆ ಈ ನಾಲ್ಕು ನಿಮಿಷಗಳ ದೃಶ್ಯವನ್ನು ಅಂತಿಮವಾಗಿ ಥಿಯೇಟರ್‌ನಲ್ಲಿ ಬಿಡುಗಡೆಯಾದ ಚಿತ್ರದ ಆವೃತ್ತಿಯಿಂದ ತೆಗೆದುಹಾಕಲಾಗಿತ್ತು. ನಂತರ ಈ ಡಿಲೀಟೆಡ್ ಸೀನ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಬಳಿಕ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದಿತ್ತು. ತ್ರಿಷಾ ಪಾತ್ರಕ್ಕೆ ಗಾಯಕಿ ಚಿನ್ಮಯಿ ಧ್ವನಿ ನೀಡಿದ್ದ ಕಾರಣ ಈ ದೃಶ್ಯ ಮತ್ತಷ್ಟು ವಿಶೇಷವಾಗಿತ್ತು.
ಎಸ್. ಜಾನಕಿ ಅವರು 2016ರಲ್ಲಿ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದರು. ಗಾಯಕಿಯಾಗಿ ಭಾರತೀಯ ಸಂಗೀತ ಲೋಕದಲ್ಲಿ ಅಳಿಸಲಾಗದ ಗುರುತು ಮೂಡಿಸಿದ ಅವರು, '96' ಚಿತ್ರದ ಈ ಅಪರೂಪದ ಕಾಣಿಕೆಯ ಮೂಲಕ ಬೆಳ್ಳಿ ಪರದೆಯಲ್ಲೂ ಅಭಿಮಾನಿಗಳ ಮನದಲ್ಲಿ ಶಾಶ್ವತ ನೆನಪಾಗಿ ಉಳಿದಿದ್ದಾರೆ.

