
ತಮಿಳು ನಟ ತಳಪತಿ ವಿಜಯ್ ಅವರ ಕೊನೆಯ ಚಿತ್ರವೆಂದು ಘೋಷಿಸಲ್ಪಟ್ಟಿರುವ 'ಜನ ನಾಯಕನ್' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.
6 ತಿಂಗಳ ಸುದೀರ್ಘ ಹೋರಾಟ.... ಕೊನೆಗೂ ತೆರೆಕಂಡ 'ಜನ ನಾಯಗನ್'
ಸೆನ್ಸಾರ್ ವಿವಾದ, ನ್ಯಾಯಾಲಯದ ಹೋರಾಟ, ಪೈರಸಿ ಹಾಗೂ ರಾಜಕೀಯ ಬೆಳವಣಿಗೆಗಳ ಬಳಿಕ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಗುರುವಾರ ಬಿಡುಗಡೆಯಾಗಿದೆ.
ತಮಿಳು ನಟ ದಳಪತಿ ವಿಜಯ್ ಅವರ ಸಿನಿ ಜೀವನದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ 'ಜನ ನಾಯಗನ್' ಇಂದು (ಜುಲೈ 23) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ರಾಜಕೀಯಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸುವ ಮೊದಲು ವಿಜಯ್ ಅಭಿನಯಿಸಿರುವ ಈ ಚಿತ್ರ ಕಳೆದ ಆರು ತಿಂಗಳಿನಿಂದ ಹಲವು ವಿವಾದಗಳು, ಕಾನೂನು ಹೋರಾಟಗಳು ಹಾಗೂ ಸೆನ್ಸಾರ್ ಸಮಸ್ಯೆಗಳನ್ನು ಎದುರಿಸಿತ್ತು.
ಮೊದಲಿಗೆ 2026ರ ಜನವರಿ 9ರಂದು ಪೊಂಗಲ್ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣಪತ್ರ ನೀಡುವಲ್ಲಿ ವಿಳಂಬವಾಯಿತು. ಪರೀಕ್ಷಾ ಸಮಿತಿಯ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿತ್ತು. ಇದರಿಂದ ಚಿತ್ರ ಬಿಡುಗಡೆಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.
ಪ್ರಮಾಣಪತ್ರ ವಿಳಂಬದ ವಿರುದ್ಧ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಚಿತ್ರದ ತಮಿಳು ಆವೃತ್ತಿಗೆ ಪ್ರಮಾಣಪತ್ರ ಸಿಗದೆ ಇದ್ದ ಕಾರಣ ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂ ಡಬ್ ಆವೃತ್ತಿಗಳ ಬಿಡುಗಡೆಯೂ ಸ್ಥಗಿತಗೊಂಡಿತ್ತು. ವಿದೇಶಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದರೂ ಬಿಡುಗಡೆಯನ್ನು ಮುಂದೂಡಬೇಕಾಯಿತು.
ಇದರ ನಡುವೆಯೇ ಏಪ್ರಿಲ್‌ನಲ್ಲಿ 'ಜನ ನಾಯಗನ್' ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ತಮಿಳುನಾಡು ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ ಹಲವರನ್ನು ಬಂಧಿಸಿದ್ದರು. ಅಧಿಕೃತ ಬಿಡುಗಡೆಯಾಗುವ ಮುನ್ನವೇ ಕೋಟ್ಯಂತರ ಮಂದಿ ಸಿನಿಮಾ ವೀಕ್ಷಿಸಿರುವುದಾಗಿ ವರದಿಯಾಗಿತ್ತು.
ಈ ಅವಧಿಯಲ್ಲಿ ವಿಜಯ್ ಅವರ ರಾಜಕೀಯ ಪಕ್ಷ ಟಿವಿಕೆ (TVK) ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಬಳಿಕ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಬೆಳವಣಿಗೆಯಿಂದ 'ಜನ ನಾಯಗನ್' ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಯಿತು.
ಕೊನೆಗೂ ಜುಲೈ 9ರಂದು ಸಿಬಿಎಫ್‌ಸಿ ಚಿತ್ರಕ್ಕೆ 'A' ಪ್ರಮಾಣಪತ್ರ ನೀಡಿತು. ಬಿಡುಗಡೆಯ ಮೊದಲು 12 ತಿದ್ದುಪಡಿಗಳು ಹಾಗೂ ಸುಮಾರು 30 ಸೆಕೆಂಡುಗಳ ದೃಶ್ಯ ಮತ್ತು ಸಂಭಾಷಣೆಗಳಲ್ಲಿ ಬದಲಾವಣೆ ಮಾಡಲು ಸೂಚಿಸಲಾಗಿತ್ತು. ಅಂಬೇಡ್ಕರ್ ಉಲ್ಲೇಖ, ಟಿವಿಕೆ ಹೆಸರು, ರಾಷ್ಟ್ರಧ್ವಜದ ದೃಶ್ಯ, ಕೆಲವು ಧಾರ್ಮಿಕ ಹಾಗೂ ಆಕ್ಷೇಪಾರ್ಹ ಪದಗಳು ಸೇರಿದಂತೆ ಹಲವು ಅಂಶಗಳನ್ನು ಪರಿಷ್ಕರಿಸಿದ ಬಳಿಕ ಚಿತ್ರಕ್ಕೆ ಅನುಮತಿ ನೀಡಲಾಯಿತು.
ಎಚ್. ವಿನೋದ್ ನಿರ್ದೇಶನದ ಈ ರಾಜಕೀಯ ಆಕ್ಷನ್ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂರು ಗಂಟೆ ಮೂರು ನಿಮಿಷಗಳ ಅವಧಿಯ ಈ ಸಿನಿಮಾ ವಿಜಯ್ ಅವರ ಸಿನಿ ಪಯಣಕ್ಕೆ ಭಾವನಾತ್ಮಕ ವಿದಾಯವಾಗಿ ಮೂಡಿಬಂದಿದ್ದು, ಮೊದಲ ದಿನದ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

