
ಮಹಿಳಾ ಮೀಸಲಾತಿ ಮಸೂದೆ ವಿಫಲಕ್ಕೆ ಸಂಸದೆ ಹೇಮಾ ಮಾಲಿನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ವಿಫಲ: ಸಂಸದೆ ಹೇಮಾ ಮಾಲಿನಿ ತೀವ್ರ ಬೇಸರ
ಮಹಿಳಾ ಮೀಸಲಾತಿ ಮಸೂದೆ ವಿಫಲಕ್ಕೆ ಸಂಸದೆ ಹೇಮಾ ಮಾಲಿನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲು ಮಹಿಳೆಯರಿಗೆ ಕರೆ ನೀಡಿದ್ದಾರೆ
ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವಲ್ಲಿ ವಿಫಲವಾಗಿರುವುದು ತಮಗೆ ವೈಯಕ್ತಿಕವಾಗಿ ಬಹಳ ಬೇಸರ ತಂದಿದೆ ಎಂದು ಮಥುರಾ ಸಂಸದೆ ಮತ್ತು ಹಿರಿಯ ನಟಿ ಹೇಮಾ ಮಾಲಿನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಕಲ್ಪಿಸುವ ಈ ಐತಿಹಾಸಿಕ ಮಸೂದೆಯು ಅಂತಿಮ ಹಂತದಲ್ಲಿ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದೇಶದ ಮಹಿಳೆಯರಿಗೆ ಒಂದು ಮಹತ್ವದ ದಿನವಾಗಲಿದೆ ಎಂಬ ದೊಡ್ಡ ನಿರೀಕ್ಷೆ ನಮಗಿತ್ತು, ಆದರೆ ಈ ಬೆಳವಣಿಗೆಯಿಂದ ತೀವ್ರ ನಿರಾಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ದಶಕಗಳಿಂದ ತಮ್ಮ ಹಕ್ಕುಗಳಿಗಾಗಿ ಕಾಯುತ್ತಿರುವ ಭಾರತದ ಕೋಟ್ಯಾಂತರ ಮಹಿಳೆಯರಿಗೆ ಇದೊಂದು ಬೇಸರದ ಸಂಗತಿಯಾಗಿದ್ದು, ಮಹಿಳೆಯರು ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಇದೇ ವೇಳೆ ದೇಶದ ಜನತೆಗೆ ಮತ್ತು ಮಹಿಳೆಯರಿಗೆ ವಿಶೇಷ ಮನವಿ ಮಾಡಿದ ಹೇಮಾ ಮಾಲಿನಿ ಅವರು, ಈ ಒಂದು ಹಿನ್ನಡೆಯಿಂದ ಯಾರೂ ಧೃತಿಗೆಡಬಾರದು ಎಂದು ಕರೆ ನೀಡಿದರು. ನಮ್ಮ ಹಕ್ಕುಗಳಿಗಾಗಿ ನಾವು ನಡೆಸುತ್ತಿರುವ ಹೋರಾಟ ನಿರಂತರವಾಗಿರಬೇಕು ಮತ್ತು ಸಮಾನ ಪ್ರಾತಿನಿಧ್ಯ ಸಿಗುವವರೆಗೂ ನಾವು ಧ್ವನಿ ಎತ್ತುತ್ತಲೇ ಇರಬೇಕು ಎಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಮಹಿಳಾ ಸಬಲೀಕರಣದ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೆ, ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕೆಂದು ಒತ್ತಾಯಿಸಿದ್ದಾರೆ.
ದೇಶದ ಸಂಸದೀಯ ಇತಿಹಾಸದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮಂಡಿಸಲಾಗಿದ್ದ ಐತಿಹಾಸಿಕ ‘ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕʼಕ್ಕೆ ಲೋಕಸಭೆಯಲ್ಲಿ ತೀವ್ರ ಹಿನ್ನಡೆಯಾಗಿತ್ತು. ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಅಗತ್ಯವಿದ್ದ ವಿಶೇಷ ಬಹುಮತ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವಿಫಲವಾಗಿತ್ತು. ಸದನದಲ್ಲಿ ಹಾಜರಿದ್ದು ಮತ ಚಲಾಯಿಸಿದವರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಸಿಗದ ಕಾರಣ ವಿಧೇಯಕವು ಪತನಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನವಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮಹತ್ವದ ಪ್ರಸ್ತಾಪಗಳ ಹೊರತಾಗಿಯೂ, ಸಂಖ್ಯಾಬಲದ ಕೊರತೆಯಿಂದಾಗಿ ವಿಧೇಯಕವು ಕಾನೂನಾಗಲು ವಿಫಲವಾಗಿತ್ತು.

