
ಬಾಲಿವುಡ್‌ನ ಹಿರಿಯ ನಟ ಗೋವಿಂದಾ ಅವರು ಸುಮಾರು ಏಳು ವರ್ಷಗಳ ವಿರಾಮದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
7 ವರ್ಷಗಳ ಬಳಿಕ ‘ರೂಪಾ’ ಸಿನಿಮಾದೊಂದಿಗೆ ಗೋವಿಂದ ಕಂಬ್ಯಾಕ್
ಬಾಲಿವುಡ್ ನಟ ಗೋವಿಂದ ‘ರೂಪಾ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಕಾಣಿಸಿಕೊಳ್ಳಲಿದ್ದು, ರಾಣಿ ಸ್ವರಂಕರ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.
ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ ಸುಮಾರು ಏಳು ವರ್ಷಗಳ ವಿರಾಮದ ಬಳಿಕ ಮತ್ತೆ ಬೆಳ್ಳಿತೆರೆಗೆ ಮರಳಲು ಸಜ್ಜಾಗಿದ್ದಾರೆ. ತಮ್ಮ ಹೊಸ ಚಿತ್ರ ‘ರೂಪಾ’ ಮೂಲಕ ಕಮ್‌ಬ್ಯಾಕ್ ಮಾಡುತ್ತಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಗೋವಿಂದ, ಚಿತ್ರದ ಮೊದಲ ಪೋಸ್ಟರ್ ಅನಾವರಣಗೊಳಿಸುವುದರ ಜೊತೆಗೆ ಹೊಸ ನಟಿ ರಾಣಿ ಸ್ವರ್ಣಕರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಚಿತ್ರದಲ್ಲಿ ನಟನಾಗಿರುವುದರ ಜೊತೆಗೆ ನಿರ್ಮಾಪಕರಾಗಿಯೂ ಗೋವಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ, ತಮ್ಮ 40 ವರ್ಷಗಳ ಸಿನಿ ಪಯಣದಲ್ಲಿ ಇದೇ ಮೊದಲ ಬಾರಿಗೆ ನಾಯಕಿ ಕೇಂದ್ರಿತ ಕಥೆಯೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿದರು. ರಾಣಿ ಸ್ವರ್ಣಕರ್‌ರನ್ನು ಪರಿಚಯಿಸುತ್ತಾ, ತಮ್ಮೊಂದಿಗೆ ನಟಿಸಿದ ಹಲವು ನಾಯಕಿಯರಿಗೆ ಯಶಸ್ವಿ ಸಿನಿಮಾಗಳು ಸಿಕ್ಕಿವೆ. ಅದೇ ರೀತಿ ರಾಣಿ ಜೊತೆಯಲ್ಲೂ ಯಶಸ್ಸಿನ ಪಯಣ ಮುಂದುವರಿಯಲಿ ಎಂದು ಆಶಿಸಿದರು.
ಸಸ್ಪೆನ್ಸ್ ಡ್ರಾಮಾ ಸಿನಿಮಾ
‘ರೂಪಾ’ ಒಂದು ಸಸ್ಪೆನ್ಸ್ ಡ್ರಾಮಾ ಚಿತ್ರವಾಗಿದ್ದು, ಯುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಗೋವಿಂದಾ ತಿಳಿಸಿದ್ದಾರೆ. ತಮ್ಮ ಹಾಸ್ಯ ಶೈಲಿಯ ಅಂಶಗಳೂ ಚಿತ್ರದಲ್ಲಿರಲಿವೆ ಎಂದು ಹೇಳಿದ ಅವರು, ಈ ಸಿನಿಮಾ ಯುವಜನರಿಗೆ ಕನಸು ಕಾಣಲು ಮತ್ತು ಆ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ಚಿತ್ರರಂಗದಲ್ಲಿ ತಮಗೆ ಹಲವು ಬಾರಿ ಅವಕಾಶಗಳು ಮುಗಿದಿವೆ ಎಂದು ಕೆಲವರು ಭಾವಿಸಿದ್ದರೂ, ಪ್ರತಿ ಬಾರಿ ಹೊಸ ಆರಂಭ ಮಾಡಿದ್ದೇನೆ ಎಂದು ಗೋವಿಂದ ಭಾವನಾತ್ಮಕವಾಗಿ ಹೇಳಿದರು. 2019ರಲ್ಲಿ ಬಿಡುಗಡೆಯಾದ ರಂಗೀಲಾ ರಾಜಾ ಬಳಿಕ ದೊಡ್ಡ ಪರದೆಯಿಂದ ದೂರವಾಗಿದ್ದ ಅವರು, ಇದೀಗ ‘ರೂಪಾ’ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
‘ರೂಪಾ’ ಚಿತ್ರದ ಘೋಷಣೆಯೊಂದಿಗೆ ಗೋವಿಂದ ಅವರ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿದ್ದು, ಅವರ ಕಮ್‌ಬ್ಯಾಕ್ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

