
ಫರಾ ಖಾನ್ ಐವಿಎಫ್ ಪ್ರಯಾಣ
ಐವಿಎಫ್ ಪ್ರಯಾಣ ಮತ್ತು ತೂಕದ ಸವಾಲು ಬಿಚ್ಚಿಟ್ಟ ಫರಾ ಖಾನ್
43ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಮೂರು ಮಕ್ಕಳಿಗೆ ತಾಯಿಯಾದ ಅನುಭವ ಹಾಗೂ ಹೆರಿಗೆ ನಂತರದ ತೂಕ ಇಳಿಕೆಯ ಸವಾಲುಗಳ ಬಗ್ಗೆ ಫರಾ ಖಾನ್ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿ ಮತ್ತು ಚಲನಚಿತ್ರ ನಿರ್ದೇಶಕಿ ಫರಾ ಖಾನ್ ಇತ್ತೀಚೆಗೆ ಶೇಖರ್ ಸುಮನ್ ಅವರ ಜನಪ್ರಿಯ ಟಾಕ್ ಶೋ 'ಶೇಖರ್ ಟುನೈಟ್'ನಲ್ಲಿ ಭಾಗವಹಿಸಿ, ತಮ್ಮ ತಾಯ್ತನದ ವೈಯಕ್ತಿಕ ಪ್ರಯಾಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 43ನೇ ವಯಸ್ಸಿನಲ್ಲಿ ಐವಿಎಫ್ (IVF) ಚಿಕಿತ್ಸೆಯ ಮೂಲಕ ತ್ರಿವಳಿ ಮಕ್ಕಳಿಗೆ ತಾಯಿಯಾದ ಸಂದರ್ಭ ಮತ್ತು ಆನಂತರ ಎದುರಿಸಿದ ದೈಹಿಕ ಸವಾಲುಗಳನ್ನು ಅವರು ಈ ವೇಳೆ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಫರಾ ಖಾನ್, ಐವಿಎಫ್ ಪ್ರಯತ್ನಿಸುವಾಗ ತಮಗೆ ಕನಿಷ್ಠ ಒಂದು ಮಗುವಾಗಬಹುದು ಎಂಬ ನಿರೀಕ್ಷೆ ಇತ್ತೇ ಹೊರತು, ತ್ರಿವಳಿ ಮಕ್ಕಳು ಜನಿಸುತ್ತಾರೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ತಮಗೆ 42 ವರ್ಷವಿದ್ದಾಗ ಐವಿಎಫ್ ಚಿಕಿತ್ಸೆ ಆರಂಭಿಸಿ, 43ನೇ ವಯಸ್ಸಿನಲ್ಲಿ ಹೆರಿಗೆಯಾಯಿತು ಎಂದು ತಿಳಿಸಿದ ಅವರು, ತಾಯ್ತನಕ್ಕೆ ಸಾಮಾನ್ಯ ಎಂದು ಪರಿಗಣಿಸಲಾಗುವ ವಯಸ್ಸಿನ ಮಿತಿಯನ್ನು ತಾವು ದಾಟಿದ್ದಾಗಿ ನೆನಪಿಸಿಕೊಂಡಿದ್ದಾರೆ. ಮಕ್ಕಳ ಜನನದ ನಂತರ ತಮ್ಮ ಇಡೀ ಕುಟುಂಬದ ಜೀವನವೇ ಬದಲಾಯಿತು ಮತ್ತು ಅವರ ಆಗಮನದ ಬಳಿಕವೇ ತಾವೊಂದು ದೊಡ್ಡ ಮನೆ ಖರೀದಿಸಿದ್ದಾಗಿ ಹೇಳುತ್ತಾ, ಮಕ್ಕಳನ್ನು ತಮ್ಮ ಪಾಲಿನ ದೈವಿಕ ಆಶೀರ್ವಾದ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಹೆರಿಗೆಯ ನಂತರದ ತೂಕ ಇಳಿಕೆಯ ಹೋರಾಟದ ಬಗ್ಗೆ ಮಾತನಾಡಿದ ಅವರು, ಇಂದಿನ ನಟಿಯರು ಮತ್ತು ಸೆಲೆಬ್ರಿಟಿಗಳು ಹೆರಿಗೆಯಾದ ಕೇವಲ ಎರಡೇ ತಿಂಗಳಲ್ಲಿ ಹಳೆಯ ಫಿಟ್ನೆಸ್‌ಗೆ ಮರಳುವುದನ್ನು ನೋಡಿ ತಮಗೆ ಆಶ್ಚರ್ಯ ಮತ್ತು ಅಸೂಯೆಯಾಗುತ್ತದೆ ಎಂದು ನಗುತ್ತಲೇ ಹೇಳಿದ್ದಾರೆ. ತಮಗೆ ಹೆರಿಗೆಯ ನಂತರದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬರೋಬ್ಬರಿ 4 ರಿಂದ 5 ವರ್ಷಗಳ ಸುದೀರ್ಘ ಸಮಯ ಬೇಕಾಯಿತು ಎಂದು ಅವರು ತಮ್ಮ ಕಷ್ಟವನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಪತಿ ಶಿರಿಶ್ ಕುಂದರ್ ಅವರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಫರಾ ಖಾನ್, ಶಿರಿಶ್ ಕೇವಲ ಒಳ್ಳೆಯ ಪತಿ ಮಾತ್ರವಲ್ಲದೆ, ಇಡೀ ಕುಟುಂಬವನ್ನು ಮುನ್ನಡೆಸುವ ಅದ್ಭುತ ತಂದೆಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ತಮ್ಮ ಮಕ್ಕಳು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಶಿರಿಶ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲದೆ, ಪತಿ ಮತ್ತು ಮಗ ಇಬ್ಬರೂ ಈಗ ಒಂದೇ ಎತ್ತರ ಇರುವುದರಿಂದ ರಾತ್ರಿಯ ವೇಳೆ ಕೋಣೆಗೆ ಯಾರು ಬಂದರು ಎಂದು ಗುರುತಿಸುವುದು ಕಷ್ಟವಾಗುತ್ತದೆ, ಆದರೆ ಬಂದು ತಬ್ಬಿಕೊಂಡಾಗ ಮಾತ್ರ ಅದು ಮಗ ಎಂದು ತಿಳಿಯುತ್ತದೆ ಎಂದು ತಮ್ಮ ಕೌಟುಂಬಿಕ ಜೀವನದ ತಮಾಷೆಯ ಪ್ರಸಂಗವೊಂದನ್ನು ಫರಾ ಖಾನ್ ಹಂಚಿಕೊಂಡಿದ್ದಾರೆ.

