
‘ದೃಶ್ಯಂ 3’ ಯಶಸ್ಸಿನ ಬಳಿಕ ಮೋಹನ್‌ಲಾಲ್ ನಟನೆಯ ‘ದೃಶ್ಯಂ 4’ ನಿರ್ಮಾಣ ಖಚಿತವಾಗಿದೆ.
ಜಾರ್ಜ್‌ಕುಟ್ಟಿಯಾಗಿ ಮತ್ತೆ ತೆರೆ ಮೇಲೆ ಮೋಹನ್‌ಲಾಲ್- ‘ದೃಶ್ಯಂ 4’ ಅಧಿಕೃತ ಘೋಷಣೆ
ಮೇ 21ರಂದು ತೆರೆಕಂಡ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಕಂಡು ಕೆಲವೇ ದಿನಗಳಲ್ಲಿ 100 ಕೋಟಿ ರೂ. ಗಡಿ ದಾಟಿತ್ತು. ಇದರ ಬೆನ್ನಲ್ಲೇ ಈಗ ದೃಶ್ಯಂ 4 ಬಗ್ಗೆ ನಿರ್ಮಾಪಕ ಆಂಟನಿ ಪೆರುಂಬಾವೂರ್ ಅಧಿಕೃತವಾಗಿ ಘೋಷಿಸಿದ್ದಾರೆ.
ಮೋಹನ್‌ಲಾಲ್ ಅಭಿನಯದ ಜನಪ್ರಿಯ ‘ದೃಶ್ಯಂ’ ಸರಣಿಯ ನಾಲ್ಕನೇ ಭಾಗ ಸಿದ್ಧವಾಗಲಿದೆ ಎಂದು ನಿರ್ಮಾಪಕ ಆಂಟನಿ ಪೆರುಂಬಾವೂರ್ ಅಧಿಕೃತವಾಗಿ ಘೋಷಿಸಿದ್ದಾರೆ. ‘ದೃಶ್ಯಂ 3’ ಯಶಸ್ಸಿನ ಬಳಿಕ ನಾಲ್ಕನೇ ಭಾಗವನ್ನು ನಿರ್ಮಿಸುವುದಾಗಿ ಅವರು ಮಜವಿಲ್ ಮನೋರಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಮೇ 21ರಂದು ತೆರೆಕಂಡ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಕಂಡು ಕೆಲವೇ ದಿನಗಳಲ್ಲಿ 100 ಕೋಟಿ ರೂ. ಗಡಿ ದಾಟಿತ್ತು. ಚಿತ್ರದಲ್ಲಿ ಮೋಹನ್‌ಲಾಲ್ ಮತ್ತೊಮ್ಮೆ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಾಣಿಜ್ಯ ಯಶಸ್ಸು ಕಂಡರೂ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ಜಾರ್ಜ್‌ಕುಟ್ಟಿ ಕಥೆಗೆ ಹೊಸ ತಿರುವು
2013ರಲ್ಲಿ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದಲ್ಲಿ ಬಿಡುಗಡೆಯಾದ ಮೊದಲ ‘ದೃಶ್ಯಂ’ ಚಿತ್ರದಲ್ಲಿ ಸಾಮಾನ್ಯ ಕುಟುಂಬ ವ್ಯಕ್ತಿಯಾಗಿದ್ದ ಜಾರ್ಜ್‌ಕುಟ್ಟಿ ತನ್ನ ಕುಟುಂಬವನ್ನು ಸಂಕಷ್ಟದಿಂದ ರಕ್ಷಿಸಲು ನಡೆಸುವ ಹೋರಾಟವೇ ಕಥೆಯ ಕೇಂದ್ರವಾಗಿತ್ತು. ಭರ್ಜರಿ ಯಶಸ್ಸು ಕಂಡ ಈ ಸಿನಿಮಾ ಬಳಿಕ ‘ದೃಶ್ಯಂ 2’ ಮೂಲಕ ಕಥೆ ಮುಂದುವರಿಯಿತು.
‘ದೃಶ್ಯಂ 2’ ಆರಂಭದಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿ ಬಳಿಕ ಚಿತ್ರಮಂದಿರಗಳಲ್ಲೂ ತೆರೆಕಂಡಿತ್ತು. ಈ ಸಿನಿಮಾ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ಕಥೆಯನ್ನು ಮತ್ತಷ್ಟು ವಿಸ್ತರಿಸಿ ಮೂರನೇ ಭಾಗಕ್ಕೆ ವೇದಿಕೆ ಸಿದ್ಧಪಡಿಸಿತ್ತು.
ನಾಲ್ಕನೇ ಭಾಗದ ಸುಳಿವು ನೀಡಿದ್ದ ಜೀತು ಜೋಸೆಫ್
ನಿರ್ದೇಶಕ ಜೀತು ಜೋಸೆಫ್ ಈ ಹಿಂದೆ ‘ದೃಶ್ಯಂ 4’ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು. ನಿರ್ಮಾಪಕ ಆಂಟನಿ ಪೆರುಂಬಾವೂರ್ ನಿರಂತರವಾಗಿ ಮುಂದಿನ ಭಾಗದ ಕಥೆಯ ಬಗ್ಗೆ ಯೋಚಿಸುವಂತೆ ಪ್ರೋತ್ಸಾಹಿಸುತ್ತಿದ್ದರು ಎಂದು ಅವರು ಹೇಳಿದ್ದರು.
ಆದರೆ ‘ದೃಶ್ಯಂ 3’ ಯಶಸ್ಸಿನ ಕಾರಣಕ್ಕೆ ಮಾತ್ರ ತಕ್ಷಣವೇ ನಾಲ್ಕನೇ ಭಾಗ ಆರಂಭಿಸಲು ತಾವು ಸಿದ್ಧರಿಲ್ಲ ಎಂದು ಜೀತು ಜೋಸೆಫ್ ಸ್ಪಷ್ಟಪಡಿಸಿದ್ದರು. ಜಾರ್ಜ್‌ಕುಟ್ಟಿ ಹಾಗೂ ಇತರ ಪಾತ್ರಗಳ ಕಥೆಯನ್ನು ಮುಂದುವರಿಸಲು ಸೂಕ್ತವಾದ ಹೊಸ ಕಥಾಹಂದರ ರೂಪಿಸಲು ಸಮಯ ಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಆಂಟನಿ ಪೆರುಂಬಾವೂರ್ ಇದೀಗ ನಾಲ್ಕನೇ ಭಾಗವನ್ನು ಖಚಿತಪಡಿಸಿರುವ ಹಿನ್ನೆಲೆಯಲ್ಲಿ ಮೋಹನ್‌ಲಾಲ್ ಮತ್ತೊಮ್ಮೆ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಜೀತು ಜೋಸೆಫ್ ಕಥೆಯನ್ನು ಯಾವ ರೀತಿಯಲ್ಲಿ ಮುಂದುವರಿಸಲಿದ್ದಾರೆ ಎಂಬುದೂ ‘ದೃಶ್ಯಂ’ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

