ಸಮಾಜಕ್ಕೆ ಉತ್ತಮ ಸಂದೇಶ ಹೊತ್ತು ತರುತ್ತಿರುವ ಧೃತಿ ಚಿತ್ರ ಮೇ 8 ರಂದು ತೆರೆಗೆ
x

ಸಮಾಜಕ್ಕೆ ಉತ್ತಮ ಸಂದೇಶ ಹೊತ್ತು ತರುತ್ತಿರುವ 'ಧೃತಿ' ಚಿತ್ರ ಮೇ 8 ರಂದು ತೆರೆಗೆ

ಚಿತ್ರ ನಿರ್ದೇಶನ ಮಾಡಬೇಕು ಎಂಬುದು ಹಲವು ಪ್ರತಿಭೆಗಳ ಕನಸಾಗಿರುತ್ತದೆ. ಕೆಲವರಿಗೆ ಅದು ನನಸಾದರೆ, ಇನ್ನು ಕೆಲವರಿಗೆ ಕನಸಾಗಿಯೇ ಉಳಿದುಬಿಡುತ್ತದೆ.


Click the Play button to hear this message in audio format

ವಿಭಿನ್ನ ಕಥಾಹಂದರ ಹಾಗೂ ಸಮಾಜಕ್ಕೊಂದು ಉತ್ತಮ ಸಂದೇಶ ಹೊತ್ತಿರುವ ಹೊಸಬರ 'ಧೃತಿ' ಚಿತ್ರವು ಮೇ 8ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಕುರಿತಾದ ಹಲವು ಸ್ವಾರಸ್ಯಕರ ಮಾಹಿತಿಗಳನ್ನು ಹಂಚಿಕೊಂಡಿದೆ.

ಚಿತ್ರ ನಿರ್ದೇಶನ ಮಾಡಬೇಕು ಎಂಬುದು ಹಲವು ಪ್ರತಿಭೆಗಳ ಕನಸಾಗಿರುತ್ತದೆ. ಕೆಲವರಿಗೆ ಅದು ನನಸಾದರೆ, ಇನ್ನು ಕೆಲವರಿಗೆ ಕನಸಾಗಿಯೇ ಉಳಿದುಬಿಡುತ್ತದೆ. ಉದ್ಯಮಿ ಜಗದೀಶ್ ಕೂಡ ಚಿಕ್ಕಂದಿನಿಂದಲೂ ನಿರ್ದೇಶಕನಾಗುವ ಕನಸು ಹೊತ್ತವರು. ಇದೀಗ ಅವರು "ಧೃತಿ" ಚಿತ್ರವನ್ನು ನಿರ್ದೇಶಿಸುವ ಹಾಗೂ ನಿರ್ಮಿಸುವ ಮೂಲಕ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದಾರೆ.


ನಿರ್ದೇಶಕ ಜಗದೀಶ್ ಮಾತು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕ ಜಗದೀಶ್, "ನಾನೊಬ್ಬ ಉದ್ಯಮಿ. ಚಿಕ್ಕಂದಿನಿಂದಲೂ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ನನಗಿತ್ತು. ಅದು ಈಗ ಈ ಚಿತ್ರದ ಮೂಲಕ ಈಡೇರಿದೆ. ಆರು ವರ್ಷಗಳ ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಆರಂಭವಾಗಿತ್ತು. ಬಂಡವಾಳ ಹೆಚ್ಚಿಲ್ಲದ ಕಾರಣ ಮೊಬೈಲ್‌ನಲ್ಲೇ ಚಿತ್ರೀಕರಣ ಮಾಡುವ ಯೋಜನೆ ಇತ್ತು. ಆನಂತರ ನನ್ನ ಪತ್ನಿ ಹಾಗೂ ಸಹೃದಯಿ ಸ್ನೇಹಿತರ ಸಹಕಾರದಿಂದ ಚಿತ್ರವನ್ನು ಕ್ಯಾಮೆರಾದಲ್ಲಿ ಚಿತ್ರಿಸಲಾಯಿತು. ಚಿತ್ರೀಕರಣ ಪ್ರಾರಂಭವಾದ ಕೆಲವೇ ದಿನಗಳಲ್ಲಿ ನಮ್ಮ ಛಾಯಾಗ್ರಾಹಕರು ವಿಧಿವಶರಾದರು. ಆಗ ನಾನೇ ಛಾಯಾಗ್ರಹಣದ ಬಗ್ಗೆ ತಿಳಿದುಕೊಂಡು ಆ ಜವಾಬ್ದಾರಿಯನ್ನೂ ನಿರ್ವಹಿಸಿದೆ. ನಮ್ಮ ಸುತ್ತಮುತ್ತ ನಡೆಯುವ ಹಾಗೂ ನಡೆದಿರುವ ಹೆಣ್ಣಿನ ಮೇಲಿನ ಶೋಷಣೆಯ ಬಗ್ಗೆ ಈ ಚಿತ್ರದ ಕಥೆ ಇದೆ. ಹಾಗಂತ ಚಿತ್ರದಲ್ಲಿ ಕೇವಲ ಶೋಷಣೆಯನ್ನೇ ತೋರಿಸಿಲ್ಲ, ಅದಕ್ಕೊಂದು ಪರಿಹಾರವನ್ನೂ ನೀಡಿದ್ದೇವೆ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ಮಾಣ ಕೂಡ ನನ್ನದೇ. ಮೇ 8ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದ್ದು, ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ," ಎಂದು ಮನವಿ ಮಾಡಿದರು.

ನಾಯಕಿ ಆಂಚಲ್ ಮಾತು

ಚಿತ್ರದಲ್ಲಿ 'ಧೃತಿ' ಎಂಬ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ನಾಯಕಿ ಆಂಚಲ್ ಮಾತನಾಡಿ, "ಇದು ನನ್ನ ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಇಂತಹ ಒಳ್ಳೆಯ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ. ನನ್ನ ಪಾತ್ರದ ಹೆಸರು 'ಧೃತಿ'. ಎಷ್ಟೇ ಸಮಸ್ಯೆಗಳು ಎದುರಾದರೂ 'ಧೃತಿಗೆಡದೆ' ಎಲ್ಲವನ್ನೂ ದಿಟ್ಟತನದಿಂದ ಎದುರಿಸುವ ಮಹಿಳೆಯ ಪಾತ್ರ ನನ್ನದು," ಎಂದು ವಿವರಿಸಿದರು.

ನಾಯಕ ಪ್ರಶಾಂತ್ ಮಾತು

ಚಿತ್ರದ ನಾಯಕ ಪ್ರಶಾಂತ್ ಮಾತನಾಡಿ, "ನಾನು ಮೂಲತಃ ನೃತ್ಯ ಕಲಾವಿದ, ನೃತ್ಯ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ. ಯಾವ ರೀತಿಯ ಪಾತ್ರದ ಮೂಲಕ ನಟನಾಗಿ ಚಿತ್ರರಂಗ ಪ್ರವೇಶಿಸಬೇಕೆಂದು ಅಂದುಕೊಂಡಿದ್ದೆನೊ, ಅಂತಹದ್ದೇ ಉತ್ತಮ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ," ಎಂದು ಸಂತಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಪ್ರಶಾಂತ್ ಮತ್ತು ಆಂಚಲ್ ಜೊತೆಗೆ ಹಲವಾರು ನೂತನ ಪ್ರತಿಭೆಗಳು ಅಭಿನಯಿಸಿದ್ದಾರೆ. ಪ್ರಸನ್ನ ಕುಮಾರ್ ಅವರ ಸಂಗೀತ ಈ ಚಿತ್ರದ ಪ್ರಮುಖ ಹೈಲೈಟ್ಸ್‌ನಲ್ಲಿ ಒಂದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ತಮ್ಮ ಸಂಗೀತದ ಕುರಿತು ಮಾಹಿತಿ ನೀಡಿದರೆ, ನಟರಾದ ಮನೋಜ್ ಕುಮಾರ್ ಹಾಗೂ ಮಧು ಮಂದಗೆರೆ ತಮ್ಮ ಪಾತ್ರಗಳ ಬಗ್ಗೆ ಅನುಭವ ಹಂಚಿಕೊಂಡರು.

Read More
Next Story