
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಪಡೆದುಕೊಳ್ಳುತ್ತಿವೆ.
ದರ್ಶನ್ ಕೇಸ್ನಲ್ಲಿ ಸಾಕ್ಷ್ಯ ನಾಶ ಸಂಚು: ನಿಖೆಯಲ್ಲಿ ಬಯಲಾಯ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್‌ಗೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ 49ನೇ ಪ್ರಮುಖ ಸಾಕ್ಷಿದಾರ ಸಂದೀಪ್ ಅವರಿಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಬಂಧಿತರನ್ನು ಪುನೀತ್, ಸುಹಾಸ್ ಹಾಗೂ ವೇಣು ಎಂದು ಗುರುತಿಸಲಾಗಿದ್ದು, ಸದ್ಯ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ವಿಚಾರಣೆ ವೇಳೆ ಪ್ರಕರಣದ ಹಿಂದೆ ಇನ್ನೂ ಕೆಲವು ಪ್ರಮುಖ ವ್ಯಕ್ತಿಗಳ ಸಂಪರ್ಕವಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಹೊಸ ಹಂತಕ್ಕೆ ಪ್ರವೇಶಿಸಿದೆ.
ಪೊಲೀಸರ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳಾದ ಪುನೀತ್, ಸುಹಾಸ್ ಹಾಗೂ ವೇಣು ಅವರಿಗೆ ಗೌರವ್ ಶೆಟ್ಟಿ ಮತ್ತು ಕಿರಣ್ ಎಂಬುವರ ಜತೆ ನಿಕಟ ಸಂಪರ್ಕವಿತ್ತು. ಪೊಲೀಸರ ಕಣ್ತಪ್ಪಿಸುವ ಉದ್ದೇಶದಿಂದ ಈ ತಂಡ ಸಾಮಾನ್ಯ ಮೊಬೈಲ್ ಕರೆಗಳನ್ನು ಬಳಸದೇ, ವಾಟ್ಸ್‌ಆ್ಯಪ್ ಕರೆಗಳ ಮೂಲಕವೇ ಪರಸ್ಪರ ಸಂಪರ್ಕದಲ್ಲಿದ್ದು ಸಂಚು ರೂಪಿಸುತ್ತಿತ್ತು ಎನ್ನಲಾಗಿದೆ.
ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಗೌರವ್ ಶೆಟ್ಟಿಗೆ ಸಂಜಯನಗರದ ಬಾರ್‌ವೊಂದರ ಮಾಲೀಕರೊಂದಿಗೆ ಆಪ್ತ ಸ್ನೇಹವಿದ್ದು, ಆ ಬಾರ್ ಮಾಲೀಕರು ಪ್ರಭಾವಿ ವ್ಯಕ್ತಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಪ್ರಭಾವವನ್ನು ಬಳಸಿಕೊಂಡು ಸಾಕ್ಷಿದಾರನ ಮೇಲೆ ಒತ್ತಡ ಹೇರುವ ಹಾಗೂ ಬೆದರಿಕೆ ಹಾಕುವ ಪ್ರಯತ್ನ ನಡೆದಿರುವ ಶಂಕೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪುನೀತ್ ಬಂಧನವಾಗುತ್ತಿದ್ದಂತೆಯೇ ಗೌರವ್ ಶೆಟ್ಟಿ ಹಾಗೂ ಕಿರಣ್ ತಲೆಮರೆಸಿಕೊಂಡಿದ್ದು, ಇಬ್ಬರ ಬಂಧನಕ್ಕಾಗಿ ಕಾಮಾಕ್ಷಿಪಾಳ್ಯ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಾಕ್ಷಿ ಹೇಳದಂತೆ ಒತ್ತಡ
ಪೊಲೀಸರ ಮಾಹಿತಿ ಪ್ರಕಾರ, ಸಾಕ್ಷಿದಾರ ಸಂದೀಪ್ ಅವರನ್ನು ಮಾತುಕತೆ ನಡೆಸುವ ನೆಪದಲ್ಲಿ ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡ ಆರೋಪಿಗಳು, ಬಳಿಕ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿಸಿದ್ದಾರೆ. ಈ ವೇಳೆ ನ್ಯಾಯಾಲಯದಲ್ಲಿ ನಟ ದರ್ಶನ್ ವಿರುದ್ಧ ಯಾವುದೇ ಸಾಕ್ಷಿ ನೀಡದಂತೆ ತೀವ್ರ ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ.
ಸಂದೀಪ್ ಅವರು ಆರೋಪಿಗಳ ಬೆದರಿಕೆಗೆ ಮಣಿಯದಾಗ, ಆರೋಪಿ ಸುಹಾಸ್ ಜೈಲಿನಲ್ಲಿರುವ ನಟ ದರ್ಶನ್ ಅವರ ಹೆಸರನ್ನು ಪ್ರಸ್ತಾಪಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಾಕ್ಷಿಗೆ ಪೊಲೀಸ್ ಭದ್ರತೆ
ಘಟನೆಯ ಬಳಿಕ ಸಂದೀಪ್ ಅವರು ನ್ಯಾಯಾಲಯದ ಮುಂದೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅವರಿಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿ 'ಡಿ ಕಂಪನಿ' ಫ್ಯಾನ್ ಪೇಜ್‌ನ ಆಡ್ಮಿನ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

