ಮಗಳು ಸಾರಾಗೆ ನೀನೇ ನನ್ನ ಪ್ರಪಂಚ ಎಂದ ತಂದೆ ರಾಜ್ ಅರ್ಜುನ್
x

ಮಗಳು ಸಾರಾ ಅರ್ಜುನ್ ಜನ್ಮದಿನಕ್ಕೆ ಅತ್ಯಂತ ಭಾವುಕ ಪತ್ರ ಬರೆದ ತಂದೆ ರಾಜ್ ಅರ್ಜುನ್.

ಮಗಳು ಸಾರಾಗೆ 'ನೀನೇ ನನ್ನ ಪ್ರಪಂಚ' ಎಂದ ತಂದೆ ರಾಜ್ ಅರ್ಜುನ್

ನಟಿ ಸಾರಾ ಅರ್ಜುನ್ ಜನ್ಮದಿನಕ್ಕೆ ತಂದೆ ರಾಜ್ ಅರ್ಜುನ್ ಭಾವುಕ ಪತ್ರ ಬರೆದಿದ್ದು, ನಿನ್ನ ಆಗಮನ ನನ್ನ ಬದುಕಿಗೆ ಬೆಳಕು ತಂದಿದೆ. ನೀನೇ ನನ್ನ ಇಡೀ ಪ್ರಪಂಚ ಎಂದು ಮಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಬಹುಭಾಷಾ ಚಿತ್ರಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿರುವ ಸಾರಾ ಅರ್ಜುನ್ ಅವರ ಜನ್ಮದಿನದ ಅಂಗವಾಗಿ ಅವರ ತಂದೆ, ಪ್ರಸಿದ್ಧ ನಟ ರಾಜ್ ಅರ್ಜುನ್ ಅವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವುಕವಾದ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಮಗಳ ಮೇಲಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿರುವ ಅವರು, ಸಾರಾ ತನ್ನ ಪಾಲಿನ ಇಡೀ ಪ್ರಪಂಚ ಎಂದು ಕರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಿಂದಿ ಭಾಷೆಯಲ್ಲಿ ಸುದೀರ್ಘವಾದ ಪತ್ರವನ್ನು ಬರೆದಿರುವ ರಾಜ್ ಅರ್ಜುನ್, "ನನ್ನ ಮಗಳೇ, ಇಂದು ನಿನ್ನ ಜನ್ಮದಿನ. ನಿನ್ನ ಹೆಸರನ್ನು ಬರೆಯಲು ಕುಳಿತಾಗಲೆಲ್ಲಾ ಅದು ನನಗೊಂದು ಕವಿತೆಯಂತೆ ಭಾಸವಾಗುತ್ತದೆ. ಏಕೆಂದರೆ ಕೆಲವು ಹೆಸರುಗಳು ಕೇವಲ ಹೆಸರಾಗಿ ಉಳಿಯುವುದಿಲ್ಲ, ಅದೊಂದು ಅದ್ಭುತ ಭಾವನೆ, ಪ್ರಾರ್ಥನೆ ಮತ್ತು ನೆಮ್ಮದಿ. ನೀನು ನನ್ನ ಜೀವನಕ್ಕೆ ಬರುವ ಮುನ್ನವೂ ದಿನಗಳು ಕಳೆಯುತ್ತಿದ್ದವು, ಆದರೆ ಮನೆಯಲ್ಲಿ ದೀಪವಿದ್ದರೂ ಬೆಳಕಿಲ್ಲದ ವಾತಾವರಣ ನನ್ನದಾಗಿತ್ತು. ನೀನು ಬಂದ ನಂತರವೇ ನನ್ನ ಒಂಟಿ ಜೀವನದಲ್ಲಿ ಹೊಸ ಬೆಳಕು ಮೂಡಿತು" ಎಂದು ಮಗಳ ಆಗಮನ ತನ್ನ ಬದುಕನ್ನು ಹೇಗೆ ಬದಲಾಯಿಸಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಜೀವನ ನಿನಗೇನು ನೀಡಿದೆ ಎಂದು ಜನರು ನನ್ನನ್ನು ಕೇಳಿದಾಗ ನಾನು ಪದಗಳಲ್ಲಿ ಉತ್ತರಿಸುವುದಿಲ್ಲ. ಏಕೆಂದರೆ ಕೆಲವು ಉತ್ತರಗಳನ್ನು ಕೇವಲ ನೋಡಿ, ಅನುಭವಿಸಬೇಕಷ್ಟೇ. ನನ್ನ ಪಾಲಿಗೆ ಆ ಎಲ್ಲ ಪ್ರಶ್ನೆಗಳಿಗೂ ನೀನೇ ಉತ್ತರ. ಕೆಲವು ಸಂಬಂಧಗಳು ಪ್ರಾರ್ಥನೆಗಿಂತಲೂ ಮಿಗಿಲಾದವು. ಅಂಥದ್ದೊಂದು ದೈವಿಕ ಕೃಪೆ ನನ್ನ ಮಡಿಯಲ್ಲಿದೆ ಎಂದು ನಾನು ದೇವರಿಗೆ ಮತ್ತು ಕಾಲಕ್ಕೆ ತಲೆಬಾಗಿ ಧನ್ಯವಾದ ಅರ್ಪಿಸುತ್ತೇನೆ. ನಿನ್ನಿಂದಲೇ ನನ್ನ ಮುಂಜಾವಿನಲ್ಲಿ ಮೃದುತ್ವವಿದೆ, ಸಂಜೆಯಲಿ ನೆಮ್ಮದಿಯಿದೆ ಮತ್ತು ನನ್ನ ಪ್ರಾರ್ಥನೆಯಲ್ಲಿ ನಂಬಿಕೆಯಿದೆ. ನೀನೇ ನನ್ನ ಪ್ರಪಂಚ" ಎಂದು ಬರೆಯುವ ಮೂಲಕ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಸಾರಾ ಅರ್ಜುನ್, ಹಲವಾರು ಜನಪ್ರಿಯ ಜಾಹೀರಾತುಗಳು ಹಾಗೂ ವಿವಿಧ ಭಾಷೆಗಳ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಧುರಂಧರ್' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸಾರಾ ನಟಿಸುತ್ತಿದ್ದು, ದೊಡ್ಡ ಮಟ್ಟದ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ತಂದೆ ರಾಜ್ ಅರ್ಜುನ್ ಅವರು 'ಸೀಕ್ರೆಟ್ ಸೂಪರ್ ಸ್ಟಾರ್', 'ತಲೈವಿ' ಮತ್ತು 'ಶೇರ್‌ಶಾ' ಮುಂತಾದ ಚಿತ್ರಗಳಲ್ಲಿನ ತಮ್ಮ ಅದ್ಭುತ ಅಭಿನಯದ ಮೂಲಕ ಬಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದಾರೆ. ತಂದೆ-ಮಗಳ ಈ ಅಪೂರ್ವ ಬಾಂಧವ್ಯದ ಪತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಾರಾ ಅವರಿಗೆ ಜನ್ಮದಿನದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Read More
Next Story