
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
ಆರ್‌ಸಿಬಿ ಗೆಲುವಿನ ಸಂಭ್ರಮ: ಪತ್ನಿ ಅನುಷ್ಕಾ ಜೊತೆ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೊತೆಯಾಗಿ ಜಬರ್ದಸ್ತ್ ಆಗಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಮಾಂಚಕ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಆರ್‌ಸಿಬಿ ಪಾಳಯದಲ್ಲಿ ಸಂಭ್ರಮದ ಮಹಾಪೂರವೇ ಹರಿದಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಭರ್ಜರಿಯಾಗಿ ಹೆಜ್ಜೆ ಹಾಕುವ ಮೂಲಕ ಇಡೀ ರಾತ್ರಿ ಸಂಭ್ರಮಿಸಿದ್ದಾರೆ.
ಮೈದಾನದಲ್ಲಿ ಕೊಹ್ಲಿ ಅಜೇಯ 75 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟ ನಂತರ, ಆರ್‌ಸಿಬಿ ಹಮ್ಮಿಕೊಂಡಿದ್ದ ವಿಶೇಷ ವಿಜಯೋತ್ಸವದ ಪಾರ್ಟಿಯಲ್ಲಿ ಈ ದಂಪತಿಯು ಡ್ಯಾನ್ಸ್ ಫ್ಲೋರ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಸದ್ಯ ಇವರಿಬ್ಬರ ಅದ್ಭುತ ನೃತ್ಯದ ವಿಡಿಯೋಗಳು ಮತ್ತು ಆಪ್ತವಾಗಿ ಆಲಿಂಗಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಈ ಅದ್ಧೂರಿ ಪಾರ್ಟಿಗಾಗಿ ವಿರಾಟ್ ಕೊಹ್ಲಿ "ಒಂದು ಬಾರಿ ಚೆನ್ನಾಗಿತ್ತು, ನಾವು ಅದನ್ನು ಎರಡು ಬಾರಿ ಮಾಡಿದೆವು" ಎಂಬ ಬರೆಹವಿರುವ ಆರ್‌ಸಿಬಿ ತಂಡದ ವಿಶೇಷ ಟಿ-ಶರ್ಟ್ ಧರಿಸಿದ್ದರೆ, ಅನುಷ್ಕಾ ಶರ್ಮಾ ಬೂಟ್-ಕಟ್ ಜೀನ್ಸ್‌ನಲ್ಲಿ ಮಿಂಚಿದ್ದಾರೆ. ಇಬ್ಬರೂ ಜೊತೆಯಾಗಿ ಮನಬಿಚ್ಚಿ ನಗುತ್ತಾ, ವಿಶಿಷ್ಟ ಶೈಲಿಯಲ್ಲಿ ನೃತ್ಯ ಮಾಡುತ್ತಿರುವುದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ಅನುಷ್ಕಾ ಮಾತ್ರವಲ್ಲದೆ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಸೇರಿದಂತೆ ಆರ್‌ಸಿಬಿಯ ಇತರೆ ಸಹ ಆಟಗಾರರೊಂದಿಗೂ ಕೊಹ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಅನುಷ್ಕಾ ಶರ್ಮಾ ತಮ್ಮ ಮೊಬೈಲ್ ಫೋನ್‌ನಲ್ಲಿ ಕೊಹ್ಲಿ ಮತ್ತು ತಂಡದವರ ನೃತ್ಯವನ್ನು ನಗುತ್ತಾ ರೆಕಾರ್ಡ್ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಟೂರ್ನಿಯುದ್ದಕ್ಕೂ ಮೈದಾನದ ಗ್ಯಾಲರಿಯಿಂದ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡಕ್ಕೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದ ಅನುಷ್ಕಾ ಶರ್ಮಾ ಅವರಿಗೆ ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಧನ್ಯವಾದ ತಿಳಿಸಿದೆ. "ಮೊದಲ ದಿನದಿಂದಲೂ ನಮ್ಮೊಂದಿಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳು ಅನುಷ್ಕಾ ಶರ್ಮಾ" ಎಂದು ಆರ್‌ಸಿಬಿ ವಿಶೇಷವಾಗಿ ಬರೆದುಕೊಂಡಿದೆ. ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ ಕೊಹ್ಲಿ, ಮೈದಾನದಲ್ಲೇ ಭಾವನಾತ್ಮಕವಾಗಿ ಪತ್ನಿಯನ್ನು ಆಪ್ಪಿಕೊಂಡ ಕ್ಷಣವೂ ಸಹ ಅಭಿಮಾನಿಗಳ ಹೃದಯ ಗೆದ್ದಿದೆ. ಸದ್ಯ ಆರ್‌ಸಿಬಿ ಅಭಿಮಾನಿಗಳು ಈ ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ ಪಟ್ಟ ಹಾಗೂ ಕೊಹ್ಲಿ-ಅನುಷ್ಕಾ ಜೋಡಿಯ ಸಂಭ್ರಮವನ್ನು ಸಾಮಾಜಿಕ ತಾಣಗಳಲ್ಲಿ ಹಬ್ಬದಂತೆ ಆಚರಿಸುತ್ತಿದ್ದಾರೆ.

